5/17/2009 04:33:00 ಅಪರಾಹ್ನ

ಕೊನೆಗೂ ಮುಗಿತಪ್ಪ ಚುನಾವಣೆ ಅನ್ನೋ ಸರ್ಕಸ್ಸು

ಅಬ್ಬ…. ಕೊನೆ್ಗೂ ಮುಗಿತು ನಮ್ಮ ದೇಶದ ಸಾರ್ವತ್ರಿಕ ಚುನಾವಣೆ…ಸುಮಾರು ೨ ತಿಂಗಳ ಆಟ ಕೊನೆಗೂ ಕೊನೆಯಾಗಿದೆ. ಗೆದ್ದೋರೆಲ್ಲ ದಿಲ್ಲಿ ತಲ್ಪಿದರೆ, ಸೋತೊರು ಮನೆ ತಲ್ಪಿದ್ದಾರೆ. ಮತದಾರರಿಗೆ ಅಭಿನಂದನೆಗಳು ಕೇವಲ ಒಂದೇ ಗುಂಪನ್ನು ಆರಿಸಿದ್ದಕ್ಕೆ. ಎಲ್ಲಿ ಕಳೆದ ಬಾರಿಯಂತೆ ಎಲ್ಲಾ ಪಕ್ಷಗಳಿಗೂ ಮತ ಹಂಚಿ ದೇಶ ಹರಿದು ಹೋಗತ್ತೇನೋ ಅನ್ಕೊಂಡಿದ್ದೆ, ಪುಣ್ಯಕ್ಕೆ ಹಂಗೆಲ್ಲ ಆಗ್ಲಿಲ್ಲ… ಕಾಂಗ್ರೆಸ್ ಮತ್ತೆ ಆರಿಸಿ ಬಂದಿದೆ (ಓಹ್… ಪೂರ್ತಿ ಜನ ಬೆಂಬಲ ಅದಕ್ಕೆ ಸಿಕ್ಕಿಲ್ಲ, ಇನ್ನೂ ಸ್ವಲ್ಪ ಕೊಂಡ್ಕೊಳ್ಬೇಕಾಗಿದೆ). ಏನೇ ಇರಲಿ, ಕೈಗೊಂಬೆ, ದುರ್ಬಲ ಪ್ರಧಾನಿ ಅಂತೆಲ್ಲ ಅನಿಸಿಕೊಂಡ ಮನಮೋಹನ ಸಿಂಗರೆ ಮತ್ತೆ ಸರ್ಕಾರ ರಚನೆ ಮಾಡುತ್ತಿದ್ದಾರೆ. ಅವರಿಗೆ ನನ್ನ ಶುಭ ಹಾರೈಕೆಗಳು. ಯಾರೂ ಅವರ ಕಾಲನ್ನು ಎಳೆಯದಿದ್ದರೆ, ಸೋನಿಯಾಗೆ ಸುಡ್ಡನ್ನಾಗಿ ಪುತ್ರ ವಾತ್ಸಲ್ಯ ಉಕ್ಕಿ ಹರಿಯದಿದ್ದರೆ, ಅವರು ೫ ವರ್ಷದ ಆಡಳಿತ ಮಾಡಲಿದ್ದಾರೆ.

ನಮ್ಮ ರಾಜ್ಯದ ಜನ ಮತ್ತೊಮ್ಮೆ ತಪ್ಪು ಮಾಡಿದ್ದಾರೆ. ಕೇಂದ್ರದಲ್ಲಿ ಆಡಳಿತ ಕಾಂಗ್ರೆಸ್ಸಿಗೆ ಸಿಕ್ಕರೆ, ಕರ್ನಾಟಕದಲ್ಲಿ ಆರಿಸಿ ಬಂದಿರೋರು BJP ಜನ. ಇವಾಗ ಮತ್ತೆ ರಾಜ್ಯಕ್ಕೆ ಅನ್ಯಾಯ ಆದ್ರೆ ಕೇಳೋರೆ ಇರಲ್ಲ (ಹಿಂದೆ ಇವ್ರೆಲ್ಲ ಕೇಳಿದ್ರು ಅನ್ನೋ ಯಾವ ಪುರಾವೆಗಳೂ ಇಲ್ಲ). ಮತ್ತೆ ರಾಜ್ಯಕ್ಕೆ ಅನ್ಯಾಯ ಆಗುತ್ತದೆ, ಪಕ್ಕದ ರಾಜ್ಯದಿಂದ ೭ ಜನ ಮಂತ್ರಿಗಳು ಆಗೋದು ಕೂಡ ಖಚಿತವಾಗಿದೆ, ನಮ್ಮಲ್ಲಿಂದ ೨ ಜನ ಆಗ್ಬೋದು ಅಷ್ಟೆ (ಕುಮಾರಣ್ಣನ ಸಂಜೆ ಹೊತ್ತಿನ ದರ್ಶನ ಸೇವೆ ಫಲ ಕೊಟ್ಟರೆ, ಅವರೂ ಕೂಡ ಮಂತ್ರಿ ಆಗ್ಬೋದು, ಅದ್ರೆ ಅದು ಸಧ್ಯಕ್ಕೆ ಗ್ಯಾರಂಟೀ ಇಲ್ಲ).

ಹಳೆ ಹುಲಿ (?) ಬಂಗಾರಪ್ಪನವರು ಸಾರೆಕೊಪ್ಪಕ್ಕೆ ವಾಪಾಸು ಬರುವುದು ನಿಜವಾಗಿದೆ. ಅವರ ಮುಂದಿನ ವಿಶ್ರಾಂತಿಯ ದಿನಗಳು ಸುಖವಾಗಿರಲಿ. ಶಿವಮೊಗ್ಗಕ್ಕೆ ಇನ್ನು ರಾಘವೇಂದ್ರನೆ ಗತಿ. ಅಪ್ಪ ಮಕ್ಕಳ ರಾಜ್ಯಭಾರ, ಜಿಲ್ಲೆಗೆ ಭಾರ ಅಗದಿದ್ದರೆ ಸಾಕು ಅಷ್ಟೆ. ರಾಜ್ಯದ ೧೯ ಸ್ಥಾನಗಳಲ್ಲಿ ಪಕ್ಷವನ್ನು ಗೆಲ್ಲಿಸಿದ್ದೀನಿ ಅಂತ ಯಡ್ಯೂರಪ್ಪನವರು ರಾಜ್ಯದ ಅಭಿವೃದ್ಧಿಯ ಬಗ್ಗೆ ಯೋಚಿಸದಿದ್ದರೆ, ಮುಂದಿನ ಚುನಾವಣೆಗೆ ಅವರನ್ನೂ ಮನೆಗೆ ಕಳುಹಿಸುವ ಸಾಧ್ಯತೆಗಳಿವೆ.

ನಾವು ಮೊದಲಿದ್ದ ಬೆಂಗಳೂರು ದಕ್ಷಿಣ ಭಾಗದಲ್ಲಿ ಯುವ ರಾಜಕಾರಣಿ ಕೃಷ್ಣ ಸೋತು, ಅನಂತಕುಮಾರ್ ಮತ್ತೆ ಗೆದ್ದಿದ್ದಾರೆ. ಅದು ಮಾಡ್ಸ್ತಿನಿ ಇದು ಮಾಡ್ಸ್ತಿನಿ ಅಂತೆಲ್ಲ ಭರವಸೆ ಕೊಟ್ಟಿರುವ ಅನಂತ್ ಏನೇನ್ ಮಾಡ್ಸ್ತಾರೆ ಅಂತ ಇನ್ನು ಕೆಲವು ದಿನಗಳಲ್ಲೆ ಗೊತ್ತಾಗತ್ತೆ.

ಚುನಾವಣೆಯಲ್ಲಿ ಖುಶಿ ಕೊಟ್ಟ ವಿಚಾರ ಅಂದ್ರೆ ನನ್ನ ಮೆಚ್ಚಿನ ವ್ಯಂಗ್ಯ ಚಿತ್ರಕಾರ ಜನಾರ್ಧನ ಸ್ವಾಮಿ ಚಿತ್ರದುರ್ಗದಲ್ಲಿ ಆರಿಸಿ ಬಂದಿದ್ದು.

ಕಾಂಗ್ರೆಸ್ಸಿನ ಹಳೆ ತಿಕ್ಕಲು ತಲೆಗಳಾದ ಜನಾರ್ಧನ ಪೂಜಾರಿ, ಮ್ಯಾಗಿ ಸೋತಿದ್ದು ರಾಜ್ಯಕ್ಕೆ ಸ್ವಲ್ಪ ಒಳ್ಳೆಯದೆ ಆಗಿದೆ. ಇನ್ನು ಮೇಲೆ ಮ್ಯಾಗಿ ಮೇಡಮ್ಮು ಮಗಳ ಜೊತೆ ಪಬ್ ಭರೋ ಮಾಡ್ತಾರಾ ಅಂತ ನೋಡ್ಬೇಕು. ಇನ್ನು ಯಾವ ಪಕ್ಷಕ್ಕೂ ಭಾರವಾಗಿದ್ದ ಸಾಂಗ್ಲಿಯಾನ ಸೋತಿದ್ದು ಕರ್ನಾಟಕಕ್ಕೆ ಸಿಕ್ಕ ದೊಡ್ಡ ನೆಮ್ಮದಿ. ಕಾಂಗ್ರೆಸ್ಸಿನ ಲವ ಕುಶರಂತಿದ್ದ ಧರ್ಮಸಿಂಗ್ ಮತ್ತು ಖರ್ಗೆ ಇನ್ನು ಒಟ್ಟಿಗೆ ಸಂಸತ್ತಿಗೆ ಹೋಗ್ತಾರೆ. ಆದ್ರೆ ಇವ್ರ ಮಧ್ಯಕ್ಕೆ ಅದ್ ಹೆಂಗೆ ಮೊಯ್ಲಿ ಆರ್ಸಿಬಂದ್ರು ಅನ್ನೋದು ಅರ್ಥ ಆಗ್ತಿಲ್ಲ. ಮರ್ತಿದ್ದೆ… ಟೀವಿ ಒಳಗೆ ಬಾಯಿ ಬಡ್ಕೊಳ್ತಿದ್ದವರನ್ನು ರಾಜಕೀಯಕ್ಕೆ ತಂದವರೇ ಈ ಭಾರಿ ಆಕೆಯನ್ನ ಅಚಾ ಅಚಾ ಹಂತ ಹಂದು, ನೀ ಮನಿಗೆ ಓಗಮ್ಮ ಹಂತ ಕಳ್ಸಿದಾರೆ.

ಸಿನೆಮಾದೋರನ್ನ ಜನ ರಾಜಕೀಯದಲ್ಲಿ ಮೆಚ್ಚದೆ ಮನೆಗೆ ಕಳುಹಿಸಿ ಒಳ್ಳೇದೇ ಮಾಡಿದ್ರು. ಅಂಬಿ, ಯೋಗಿ (ಮಾಡಿದ್ದು ೨-೩ ಸಿನೆಮ ಅಷ್ಟೆ) ಎಲ್ಲ ಇನ್ಮೆಲೆ ಮತ್ತೆ ವಾಪಾಸ್ ಬರ್ತಾರೆ ಬೆಳ್ಳಿತೆರೆಗೆ. ಬ್ಯಾಡಾ… ಇಲ್ಲಿಗೂ ಬರ್ಬೇಡಿ ಅಂತ ಜನ ಹೇಳೋ ಎಲ್ಲಾ ಸಾಧ್ಯತೆಗಳೂ ಇವೆ.

ಇನ್ನು ಗಣಿಧಣಿ ಅನ್ನಿಸಿಕೊಂಡೋರು ತಮ್ಮ ಮನೆಯ ಮತ್ತಿಬ್ಬರನ್ನು ರಾಜಕೀಯಕ್ಕೆ ತಂದಿದ್ದು ಅಲ್ಲದೆ, ದೆಹಲಿಯಲ್ಲು ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ. ಪಕ್ಕದ ರಾಜ್ಯದಲ್ಲಿ ಇವರ ವ್ಯವಹಾರಿಕ ಗೆಳೆಯನೆ ಮತ್ತೆ ಮುಖ್ಯಮಂತ್ರಿ ಆಗುತ್ತಿರುವುದು, ಇವರ ಬಲವನ್ನು ಮತ್ತಷ್ಟು ಹೆಚ್ಚಿಸಲಿದೆ.

ಇನ್ನು ನಮ್ಮ ರಾಜ್ಯದಿಂದ ಗೆದ್ದಿರುವ ಜನ ಯಾವ ಅಭಿವೃದ್ಧಿಯ ಕೆಲಸ ಮಾಡುವ ಭರವಸೆಗಳೂ ಇಲ್ಲ, ಹಂಗಂತ ಇವರು ಕೆಲ್ಸ ಮಾಡ್ಸುತ್ತಾರೆ ಅನ್ನೋ ಯಾವ ನಿರೀಕ್ಷೆಯೂ ಇಲ್ಲ. ಏನೋ ಮತದಾರರ ದಯೆಯಿಂದ ದೆಲ್ಲಿ ಟ್ರಿಪ್ಪಿನ ಭಾಗ್ಯ ದೊರೆತಿದೆ ಅಷ್ಟೆ.

ಕೇರಳ ಮತ್ತೆ ಬಂಗಾಳಗಳಲ್ಲಿ ಲಾಲ್ ಸಲಾಮಿನ ಮಂದಿ ಸೋತಿದ್ದು ಸ್ವಲ್ಪ ಆಶ್ಚರ್ಯ ತಂದಿದೆ. ಅವ್ರನ್ನ ಹೆಸ್ರಿಲ್ಲದ ಹಾಗೆ ಬಡಿದು ಜನ ಮನೆಗಟ್ಟಿದ್ದಾರೆ. ಇನ್ನು ಮೇಲಾದ್ರು ಮನಮೋಹನರು ದೇಶಕ್ಕೆ ಮನಮೋಹಕ ಕೆಲಸ ಮಾಡಬಹುದೇನೋ!! ಹಾಗೆ ಲಾಲೂನ ಲಾಟೀನಿಗೆ ನಿತೀಶರ ಬಾಣ ತಾಗಿ, ಅದರಿಂದ ಬಿದ್ದ ಸೀಮೆಯೆಣ್ಣೆ, ಪಾಸ್ವಾನರ ಮನೆಗೆ ಬೆಂಕಿ ಹಚ್ಚಿದೆ.

ಪಕ್ಕದ ತೆಲುಗು ರಾಜ್ಯದ ಚಿತ್ರರಂಗದ ಸಾರ್ವಭೌಮ ತನ್ನ ತಂಡದೊಂದಿಗೆ ಮಣ್ಣು ಮುಕ್ಕಿದ್ದಲ್ಲದೆ, ಮತ ವಿಭಜನ ಮಾಡಿ, ಹೆರಿಟೇಜ್ ಡೈರಿಯ ನಾಯ್ಡು ಸೋಲುವಲ್ಲಿ ಮಹತ್ತರವಾದ ಕಾಣಿಕೆ ನೀಡಿದ್ದಾನೆ. ಈ ಮನುಶ್ಯ ಕೇವಲ ೮ ತಿಂಗಳ ಪಕ್ಷ ಕಟ್ಟಿ, ತನ್ನ ಮನೆತನಕ್ಕೆ ಮಹತ್ತರವಾದ ಕಾಣಿಕೆ ಸಂಗ್ರಹಿಸಿದ್ದಾನೆ. ನನ್ನ ಗೆಳೆಯರು ನೀಡಿದ ಮಾಹಿತಿ ಪ್ರಕಾರ, ಒಂದು MLA ಟಿಕೇಟಿಗೆ ೨ ಕೋಟಿ, MP ಟಿಕೇಟಿಗೆ ೪-೫ ಕೋಟಿ ಸಂಗ್ರಹಿಸಿದ್ದಾನಂತೆ!! ಬರೀ ಟಿಕೆಟ್ ಮಾರಾಟದಿಂದನೆ ಸುಮಾರು ೬೦೦ ಕೋಟಿ ಮಾಡಿರುವ ಸಾಧ್ಯತೆ ಇದೆ. ಇದು ಯಾವ ಸಿನೆಮಾದ ಯಶಸ್ಸಿಗಿಂತ ಮಿಗಿಲಾದದ್ದೆ!!

ಪ್ರಧಾನಿಯಾಗುವ ಕನಸು ಕಾಣುತ್ತಿದ್ದ ಶ್ರೀ ಅಡ್ವಾಣಿಯವರು ಯಾವುದೇ ನಿವೃತ್ತಿವೇತನವನ್ನು ಅಪೇಕ್ಷಿಸದೆ ಸಕ್ರಿಯ ರಾಜಕೀಯದಿಂದ ನಿವೃತ್ತರಾಗುತ್ತಿದ್ದಾರೆ. ಇನ್ನಾದರೂ ಅವರು ತಮ್ಮ ಉಳಿದ ಸಮಯವನ್ನು ಮನೆಯಲ್ಲೇ ಕಳಿಯಲಿ. ಅವರಿಗೆ ನನ್ನ ಶುಭಹಾರೈಕೆಗಳು.

ಕೊನೆಯದಾಗಿ ಮತ್ತೊಮ್ಮೆ ಮನಮೋಹನರಿಗೆ ಶುಭಾಷಯಗಳು. ಸಧ್ಯದ ಪರಿಸ್ಥಿತಿಯಲ್ಲಿ ಭಾರತ ನಿಮ್ಮಿಂದ ಬಹಳಷ್ಟನ್ನು ಅಪೆಕ್ಷಿಸುತ್ತಿದೆ, ಜನಕ್ಕೆ ಮೋಸ ಆಗುವುದಿಲ್ಲ ಅಂತ ನಂಬಿರುತ್ತೇನೆ, ಒಳ್ಳೆಯ ಕೆಲಸ ಮಾಡಿ ದೇಶಕ್ಕೆ.