10/27/2008 03:03:00 ಅಪರಾಹ್ನ

ನಗುಮೊಗದ ಕಸ್ಟಮರ್ ಸರ್ವಿಸಾ!!! ಹಂಗಂದ್ರೆ……?????

ಭಾರತದಲ್ಲೆ ಇರೋರಿಗೆ ಕಸ್ಟಮರ್ ಸರ್ವಿಸ್ ಅಂದ್ರೆ ಏನು ಅಂತ ಬಹಳನೇ ಚನ್ನಾಗಿ ಗೊತ್ತಿರತ್ತೆ, ಆದ್ರೆ ಇಲ್ಲಿ ಹಾಗಲ್ಲ. ಸರ್ವಿಸ್ ಇಂಡಸ್ಟ್ರಿಯಲ್ಲಿ ಇರೋರಿಗೆ ಅದ್ರ ಗಂಧಗಾಳಿನೂ ಇಲ್ಲ, ಕಸ್ಟಮರ್ ಅಂದ್ರೆ ಅವ್ರು ಕೊಡೊ ಸೇವೆನ ಬೇಡೊ ಜನ ಅಂತ ಅನ್ಕೊಂಡಿದಾರೆ. ಇಲ್ಲಿಗೆ ಬಂದಮೇಲೆ ಇವರ ಸೇವಾಮನೋಭಾವ ನೋಡಿ, ಇದನ್ನ ಬರಿಬೇಕಾಯ್ತು.

ಬೆಂಗಳುರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಇಲ್ಲಿನ ಸರಕಾರಿ ಸ್ವಾಮ್ಯದ Gulf Air ಹತ್ತಿದಾಗಲೆ ಇದರ ಮೊದಲ ಅನುಭವ ಅಯಿತು. ನಗುಮೊಗದ ಸೇವೆ ಕೊಡಿ ಅಂತನೆ ಎಲ್ಲ Airline Companies ಗಗನಸಖಿಯರನ್ನ ಗಗನಸಖರನ್ನ hire ಮಾಡುತ್ವೆ. ಆದರೆ Gulf Air ಏನು ಕಂಡು ಇವರನ್ನ hire ಮಾಡಿದೆ ಅನ್ನೋದು ಇವತ್ತಿಗೂ ಅರ್ಥ ಆಗಿಲ್ಲ. ಎಲ್ಲಾರು ಗಂಟುಮುಖದವರೆ ಅದ್ರಲ್ಲಿ. ಏನ್ ಬೇಕಾದ್ರು ಕೇಳಿ ತಂದ್ ಬಡಿತಾರೆ ನಿಮ್ಮ ಮುಂದೆ, ಆದ್ರೆ ನಗು ಮಾತ್ರ ಅವ್ರಲ್ಲಿ ಕೇಳ್ಬೇಡಿ. ಅದು ಸಿಕ್ಕಲ್ಲ ಕಾಸ್ ಕೊಟ್ರುನು. ಸರಿ ಹಾಳಗ್ ಹೋಗ್ಲಿ ಹೆಂಗು ನಂಗೂ ಸುಸ್ತಾಗಿತ್ತು ಅಂತ ಅವತ್ತು ಅದ್ರ ಬಗ್ಗೆ ತಲೆ ಕೆಡ್ಸ್ಕೊಂಡಿರ್ಲಿಲ್ಲ. ಇನ್ನೇನು ಬಹರೇನ್ ಬರತ್ತೆ ಅನ್ನೋವಾಗ ನನ್ ಪಕ್ಕ ಕುತ್ಕೊಂಡಿದ್ದ ಒಬ್ಬರು ಹಿರಿಯರು ಕೇಳೇಬಿಟ್ರು ಅಲ್ಲಿಯ ಒಬ್ಬ ಗಗನಸಖನಿಗೆ, ನಿಮ್ಮೆಲ್ಲರ ಮನೆಲೂ ಇವತ್ತೇ ಯಾರಾದ್ರು ಸತ್ ಹೋದ್ರಾ ಅಂತ. ಹಂಗೆಲ್ಲ ಏನೂ ಆಗಿಲ್ಲ ಅಂತ confirm ಆದ್ಮೇಲೆ ಮತ್ತೆ ಯಾಕೆ ಎಲ್ಲಾರು ಅಳುಮುಖ, ಗಂಟುಮುಖ ಇಟ್ಕೊಂಡಿದಿರಿ ಅಂತನೆ ಕೇಳಿದ್ರು, ಅವ್ನು ಅದಕ್ಕೆ ಏನೊ ಕಿತ್ ಹೋಗಿರೊ dialogue ಹೊಡ್ದು ಹೋದ. ಆಮೇಲೆ ಮತ್ತೆ ನಮ್ಮ ಬೆಂಗಳೂರಿನ ಹಿರಿಯರೆ ಅವರಿಗೆಲ್ಲ ಇನ್ನೊಂದು ಕಿತ್ ಹೋಗಿರೊ ಜೋಕೆ ಹೇಳಿ ನಗಿಸೊ ಪ್ರಯತ್ನನು ಮಾಡಿದ್ರು.

ಸರಿ ಈ ಜನ ಹಿಂಗೆ ಅಂತ ಅನ್ಕೊಂಡು ನಾನು ನಮ್ ಕಂಪನಿ ಕೊಟ್ಟಿದ್ದ ಅಪಾರ್ಟ್ಮ್ಮೆಂಟ್ಗೆ ಹೋದೆ. ನನ್ ಪುಣ್ಯಕ್ಕೆ ಅಲ್ಲಿ ನಮ್ಮ ದೇಶದವರೆ ಎಲ್ಲಾರು ಇದ್ದಿದ್ರಿಂದ ಹೆಚ್ಗೆ ಎನೂ ತೊಂದರೆ ಆಗಿರ್ಲಿಲ್ಲ.

Mostly ಬಹರೇನಿನ ಗಾಳಿಗೆ ಇರಬೇಕು ಹಿಂಗೆಲ್ಲ ಆಗೋದು. ನಮ್ಮ ದೇಶದ್ದೆ ಆದ ICICI Bankಅಲ್ಲಿ ಸಿಗೋ ಭಾರತೀಯರು ಕೂಡ ಮುಖ ಗಂಟು ಹಾಕ್ಕೊಂಡಿದ್ರು. ನಾನು ನೋಡಿದ ಹಾಗೆ Citi Bank ಒಳಗೆ ಕೆಲ್ಸ ಮಾಡೊ ಭಾರತೀಯರು ಮಾತ್ರ ತಮ್ಮ ಭಾರತೀಯತೆಯನ್ನು ಉಳ್ಸ್ಕೊಂಡಿದಾರೆ ಅಂತ ಅನ್ಸತ್ತೆ. ಅಲ್ಲಿ ಎಷ್ಟೊಂದು ಚನಾಗಿ ನೋಡ್ಕೊಂಡ್ರು. ನಾನು ನನ್ನ ಅಕೌಂಟ್ ಒಪೆನ್ ಮಾಡಿದ ದಿನದಿಂದ ಇವತ್ತಿನವರೆಗು ಚನ್ನಾಗಿನೆ ನೋಡ್ಕೊಳ್ತಿದಾರೆ, ಪರ್ವಾಗಿಲ್ಲ ಅವ್ರು.

ಇನ್ನೊಂದು ಕಸ್ಟಮರ್ ಸರ್ವಿಸ್ ಎಂಬ ಶಬ್ಧದ ಅರ್ಥನೇ ಗೊತ್ತಿಲ್ಲದ ಸಂಸ್ಥೆ ಇದೆ. ಅದ್ರ ಹೆಸ್ರು Zain (Good ಅಂತ ಅರ್ಥ ಬರತ್ತೆ ಇಂಗ್ಲಿಷಲ್ಲಿ). ಇದೊಂದು Vodafone ಸ್ವಾಮ್ಯದ ದೂರವಾಣಿ ಸಂಸ್ಥೆ. ಕಸ್ಟಮರ್ ಸರ್ವಿಸ್ ಅಂದ್ರೆ ಏನೂ ಅನ್ನೊದೇ ಗೊತ್ತಿಲ್ಲ ಇಲ್ಲಿ ಕೆಲ್ಸ ಮಾಡೊ ಜನಕ್ಕೆ. ನಕ್ಕರೆ ಎಲ್ಲಿ make-up ಹಾಳಗತ್ತೋ ಅನ್ನೊ ಭಯ ಇದೆ ಅಂತ ಅನ್ಸತ್ತೆ, ಅದಕ್ಕೆ ಇಲ್ಲಿ ಯಾರೂ smile ಕೂಡ ಮಾಡಲ್ಲ. ಇವ್ರ ಜೊತೆ ಸಕ್ಕತ್ತಾಗೆನೆ ಜಗಳ ಆಡಿದಿನಿ ಈ ವಿಚಾರಕ್ಕೆ. ಮೊನ್ನೆ ಮತ್ತೆ ಹೋದಾಗ ಇನ್ನೊಂದು comlaint ಕೂಡ ಕೊಟ್ಟಿದಿನಿ ಈ ವಿಚಾರವಾಗಿ. ನೊಡ್ಬೆಕ್ ಏನ್ ಮಾಡ್ತಾರೆ ಅಂತ.

ಇಲ್ಲಿನ ಅಂಗಡಿಗಳಲ್ಲೂ ಇದೇ ಹಣೆಬರಹ. ಅದ್ಯಾಕೆ ಇವ್ರನ್ನ ಕೆಲ್ಸಕ್ಕೆ ಇಟ್ಕೊಳ್ತಾರೆ ಅನ್ನೋದೆ ಅರ್ಥ ಆಗಲ್ಲ. ಯಾವ mallಗೆ ಹೋಗಿ, ಯಾವ್ದೇ ಅಂಗಡಿಗೆ ಹೋಗಿ, ಎಲ್ಲಿ ನೋಡಿದರು ಗಂಟು ಮೋರೆಗಳೇ ಕಾಣಿಸೊದು ಇಲ್ಲಿ. ಇವಾಗೆಲ್ಲ ನಂಗೂ ಇದ್ರ ಅಭ್ಯಾಸ ಆಗಿ ಹೋಗಿದೆ, ಅದ್ರ ಬಗ್ಗೆ ಹೆಚ್ಗೆ ತಲೆ ಕೆಡ್ಸ್ಕೊಳೊದಿಲ್ಲ ಇವಾಗ…

ಪುಣ್ಯಕ್ಕೆ ನಮ್ ಕಂಪನಿಲಿ ಇಂತ ಪ್ರಾಬ್ಲಮ್ ಇಲ್ಲ. ಯಾಕೆಂದ್ರೆ ನಮಿಗೆ ಕಸ್ಟಮರ್ಸ್ ಕೂಡ ಇಲ್ಲ….. :)

10/18/2008 09:07:00 ಅಪರಾಹ್ನ

ಬಹರೇನ್- ಹಿಂಗೆ ಒಂದಿಷ್ಟು ಬಿಟ್ಟಿ ಮಾಹಿತಿ

ನನಗೆ ಭಾಳ ಇಷ್ಟ ಆಗೋ ವಿಚಾರಗಳಿಂದ ಶುರು ಮಾಡಣ :)

ಈ ದೇಶದಲ್ಲೂ ಸಿನೆಮಾ ಟಾಕಿಸ್ ಇವೆ. ಆವಲ್ ಸಿನೆಮಾ, ಆಲ್ ಹಮ್ರ ಸಿನೆಮಾ, ದಾನ ಸಿನೆಮ, ಸೀಫ್ ಸಿನೆಮಾ ಹೀಗೆ ಹಲವಾರು ಸಿನೆಮಾ ಮಂದಿರಗಳು ಇವೆ. ಇದರಲ್ಲಿ ಅವಲ್, ಹಮ್ರ ಮಾತ್ರ traditional one Screen halls. ಸೀಫ್ ಮತ್ತು ದಾನಾ ಸಿನೆಮಾಗಳು ವಟಾರದ ಟೆಂಟ್ಗಳು. Dana Mall ಒಳಗೆ 12 sceens ಇದ್ದರೆ, Seef Mall ಒಳಗೆ 16 Screens ಇವೆ. ನಮ್ಮ ದೇಶದ ಹಿಂದಿ,ಮಲಯಾಳಿ, ತೆಲುಗು ಮತ್ತು ತಮಿಳು ಸಿನೆಮಾಗಳೂ ಇಲ್ಲಿ ಪ್ರದರ್ಷನ ಆಗುತ್ತವೆ. ಕನ್ನಡ ಮಾತ್ರ ಇಲ್ಲ.

ಇಲ್ಲಿ ಹಿಂದಿ ಸಿನೆಮಾಗಳು ಗುರುವಾರನೆ ಬಿಡುಗಡೆ ಆಗತ್ತೆ. ಇಂಗ್ಲಿಷ್ ಮತ್ತು ಅರಬಿ ಸಿನೆಮಾಗಳಿಗೆ ಯಾವಾಗ್ಲೂ ಜನ ಇರ್ತಾರೆ. ಬೇರೆ ಭಾಷೆಗಳಿಗೆ ಹೆಚ್ಚಿಗೆ ಜನ ಇರದೆ ಟಿಕೆಟ್ ಅರಾಮಾಗಿ ಸಿಗತ್ತೆ. ಸಿನೆಮಾ ನೋಡೊದು ಮಾತ್ರ ಭಾರಿ costly ವ್ಯವಹಾರ. ಇಲ್ಲಿ ticket rate ಶುರು ಆಗೋದೇನೆ ೨.೫ ದಿನಾರಕ್ಕೆ. (ಸುಮಾರು 250 ರುಪಾಯಿ). ಸೀಫ್ ಮತ್ತು ದಾನಾ ಸಿನೆಮಾಗಳಲ್ಲಿ ೩.೫ ದಿನಾರ್ ಅಗತ್ತೆ ಒಂದು ಟಿಕೆಟ್ಗೆ.

ಈ ದೇಶದಲಿ ಪ್ರಪಂಚದ ಎಲ್ಲಾ ಪತ್ರಿಕೆಗಳು ಸಿಗುತ್ವೆ. 200fils (ಅಂದರೆ ಸುಮಾರು 20 ರುಪಾಯಿ) ಇಂದ ಹಿಡಿದು 10 ದಿನಾರವರೆಗಿನ (ಸುಮಾರು 1000ರುಪಾಯಿ) ಪತ್ರಿಕೆಗಳು ಮಾರಾಟ ಅಗುತ್ವೆ. ನಮ್ಮ ಕನ್ನಡದ ತರಂಗ, ಸುಧ, ಲಂಕೆಶ್, ಹಾಯ್ ಬೆಂಗಳೂರು, ಪೋಲೀಸ್ ನ್ಯೂಸ್, ಮುಂತಾದ ವಾರ ಪತ್ರಿಕೆಗಳು, ಪ್ರಜಾವಾಣಿ ಮತ್ತು ಉದಯವಾಣಿ ದಿನ ಪತ್ರಿಕೆಗಳು ಸಿಗುತ್ವೆ. ಇಲ್ಲಿ ಸ್ಥಳೀಯ ಪತ್ರಿಕೆಗಳು ಕೂಡ ಓದೊಕೆ ಚನಾಗಿರುತ್ತವೆ. Gulf Daily News, Khaleej Times, Gulf News, Bahrain Tribune ಎಂಬ ಇಂಗ್ಲಿಷ್ ಭಾಷೆಯ ಪತ್ರಿಕೆಗಳು ಮತ್ತು ೫-೬ ಅರಬಿ ಭಾಷೆಯ ಪತ್ರಿಕೆಗಳು ಇಲ್ಲಿ ಮುದ್ರಣವಾಗುತ್ತವೆ.

ಬಹರೇನಿನಲ್ಲಿ ಭಾರತೀಯ ಹೋಟೆಲುಗಳಿಗೇನು ಬರ ಇಲ್ಲ. ಅವಲ್ ಸಿನೆಮಾದ ಎದುರೆನೆ 4 ಭಾರತೀಯ ಹೋಟೆಲುಗಳಿವೆ. ಅದರಲ್ಲಿ ಬಹಳ ಹೆಸರುವಾಸಿ ಆಗಿರುವುದು ಸಂಗೀತಾ ಎಂಬ ಮದ್ರಾಸಿ ಹೋಟೆಲ್. ಇದರ ಹತ್ತಿರ ಮೈಸೂರು ಹೋಟೆಲ್ , Chef Corner ಮತ್ತು Central Cafe ಎಂಬ ಕನ್ನಡದ ಹೋಟೆಲ್ ಇವೆ. ಅದನ್ನ ಬಿಟ್ಟರೆ ಆನಂದಭವನ ಎಂಬ ಉಡುಪಿ ಮೂಲದ ಹೋಟೆಲ್ ಕೂಡ ಮನಾಮ ಮಾರ್ಕೇಟಿನಲ್ಲಿದೆ.

ಬಹರೇನಿನ ತುಂಬ ಲೆಬನಾನಿ ಹೋಟೆಲ್ ಇವೆ. ಇದಲ್ಲದೆ ಬಹಲಷ್ಟು Dance bars, discoಗಳು ಇವೆ. ಇವುಕ್ಕೆ ಇಂತ ಸೌಲಭ್ಯಗಳೇ ಇರದ ಸೌದಿ ಮತ್ತು ಕುವೈತಿ ಜನರೆನೆ ಹೆಚ್ಚಿನ ಗಿರಾಕಿಗಳು. ಇಲ್ಲಿ ಭಾರತೀಯರಿಗೆ ಯಾವುದೆ ಬೆಲೆ ಇಲ್ಲ. ಇದನ್ನೆಲ್ಲ ಒತ್ತಟ್ಟಿಗಿಟ್ಟರೆ ಅಮೆರಿಕಾ ಮೂಲದ ಹೋಟೆಲ್ಗಳು ಬಹಳಾನೆ ಇವೆ.

ಮೇಲೆ ಕಾಣಿಸುತ್ತಿರುವುದು ಸಂಗೀತಾ ಹೋಟೆಲಿನಲ್ಲಿ ನನಗೆ ಬಹಳ ಇಷ್ಟ ಆದ ತಿಂಡಿ. ಇದಕ್ಕೆ Mini-Tiffin ಅಂತ ಹೇಳ್ತಾರೆ ( ಹಂಗೇನು ನಂಗೆ ಅನ್ಸಲ್ಲ). ಇದಕ್ಕೆ ಕೇವಲ ಒಂದು ದಿನಾರು ಮಾತ್ರ. :) ನಮ್ಮನೆವ್ರಿಗೆ ಇಲ್ಲಿ ಬಹಳ ಇಷ್ಟ ಆಗೊದು ಇಲ್ಲಿ ಸಿಗುವ ಸಂಗೀತಾ Special Falooda. ಅದು ಹೆಂಗಿರತ್ತೆ ಅಂತ ನೀವೆ ನೊಡಿ...

ಈ ದೇಶಕ್ಕೆ ಪ್ರಪಂಚದ ಎಲ್ಲಾ ಭಾಗಗಳಿಂದ ಕೆಲಸಗಾರರು ಬರುತ್ತಾರೆ. ಅದರಲ್ಲಿ ಹೆಚ್ಚಿನ ಜನ ಪಿಲಿಪೈನ್ ದೇಶ, ಭಾರತ, ಪಾಕಿಸ್ತಾನ, ಬಾಂಗ್ಲಾದೆಶದವರೇ ಇದ್ದಾರೆ. ಹೀಗೆ ಬೇರೆ ಬೇರೆ ದೇಶಗಳಿಂದ ಬಂದಿರುವ ಕೆಲಸಗಾರರು ತಮ್ಮ ತಮ್ಮ ದೇಶದಿಂದ ಬಂದಿರುವ ಇತರ ಜನರನ್ನು ಸೇರಲು ತಮ್ಮದೇ ಆದ ಕ್ಲಬ್ಬುಗಳನ್ನು ಹುಟ್ಟುಹಾಕಿದ್ದಾರೆ. ನಮ್ಮ ದೇಶದ ಜನರು 1915ರಲ್ಲೆ Indian Club ಅನ್ನೋ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಸದ್ಯ ಅದೇನು ಇಡೀ ದೇಶವನ್ನು represent ಮಾಡ್ತಿಲ್ಲ, ಅದು ಇವಾಗ ಕೇರಳೀಯರ ಸಂಸ್ಥೆಯ ತರ ಆಗಿದೆ. ಕನ್ನಡದ ಜನ ತಮಗಾಗಿ ಕನ್ನಡ ಸಂಘ ಶುರು ಮಾಡಿಕೊಂಡಿದ್ದಾರೆ.

10/04/2008 11:14:00 ಅಪರಾಹ್ನ

ಬಹರೇನಿನ ಬೆಂಕಿ ಬಿಸಿಲಿನಲ್ಲಿ ಒಂದು ಸಣ್ಣ ಪಯಣ

ಬುಧವಾರ ಬೆಳಿಗ್ಗೆ ನಾನು ಎದ್ದಾಗ ನನ್ನ ಮೊಬೈಲ್ನಲ್ಲಿ ಒಂದು ಮೆಸೇಜ್ ಇತ್ತು, "ನೀವೆಲ್ಲ free ಇದ್ದರೆ ಇವತ್ತು ಬಹ್ರೈನ್ ಸುತ್ತಣ್ವ? ಅಂತ.. ಅದು ನಮ್ಮ ಹೊಸ ಕನ್ನಡಿಗ ದೊಸ್ತು ದಿನೇಶ್ ಕಳಿಸಿದ್ದಾಗಿತ್ತು.. ಸರಿ, ನಮಿಗು ಹೆಂಗು ರಜ ಇತ್ತಲ, ಜೊತೆಗೆ ಸುಧಿ ಕೂಡ ಸೌದಿಯಿಂದ ಬಂದಿದ್ದ, ದೇಶನ ನೋಡೆಬಿಡನ ನಾವು ಬರ್ತಿವಿ ಅಂತ ಹೇಳಿದ್ವಿ. 11 ಗಂಟೆಗೆ ಹೊರ್ಡೋದು ಅಂತ ಡಿಸೈಡ್ ಅಯಿತು.. ಸರಿ ಎಲ್ಲ ರೆಡಿ ಅಗೊಶ್ಟ್ರಲ್ಲಿ ನೆನಪಾಯಿತು ನಮ್ಮ ಸುಧಿ ಹೊರಗೆ ಎನೂ ತಿನ್ನಲ್ಲ ಅಂತ.... ತಕ್ಷಣಕ್ಕೆ ಲಕ್ಷ್ಮಿ ಹೇಳಿದ್ಲು ನಾನು ಪಲಾವ್ ಮಾಡ್ತಿನಿ ಅಂತ.. ನಾವು ಪಲಾವ್ ಮತ್ತೆ ಮೊಸರನ್ನ ರೆಡಿ ಮಾಡೋಷ್ಟ್ರಲ್ಲಿ 12.30 ಆಗಿತ್ತು. ಅದೆ ಹೊತ್ತಿಗೆ ದಿನೇಶ್ ತಮ್ಮ ಪತ್ನಿಯೊಂದಿಗೆ ಬಂದರು. ಅವರ ಕಾರಿನಲ್ಲೇ ನಮ್ಮ ಬಹ್ರೈನ್ ಯಾತ್ರೆ ಸುಗಮವಾಗಿ ನಡೆಯಿತು.. ಅದರ ಮುಂದಿನ ಕಥೆ...

ಮೊದ್ಲೆ ಒಂದ್ಸಲ ಹೇಳಿದ್ನಲ, ದೇಶ ತೀರ ಎನು ದೊಡ್ಡದಿಲ್ಲ ಅಂತ, ನಮ್ಮ್ ಬೆಂಗಳೂರಿಗಿಂತ ಸ್ವಲ್ಪ ಸಣ್ಣಕೆ ಇದೆ. ಆದ್ರೆ ಅತ್ಯುತ್ತಮವಾದ ರಸ್ತೆ ಇರೊದ್ರಿಂದ ಬೆಂಗಳೂರಲ್ಲಿ ಸುಸ್ತಾದಷ್ಟು ಸುಸ್ತಾಗಲ್ಲ ಇಲ್ಲಿ. ಅದ್ರಲ್ಲೂ ಕಾರಲ್ಲಿ ಹೋದ್ರೆ ಎನೂ ಗೊತ್ತಾಗೊದಿಲ್ಲ. J

ನಮ್ಮನೆಯಿಂದ ಶುರುವಾದ ಪ್ರಯಾಣ ದೇಶದ ರಾಜರ ವಂಶದವರು ಇರುವ area ಕಡೆ ತಿರುಗಿತು. ಬಹ್ರೈನಿನಲ್ಲಿ ನಾನು ಕಂಡ ಅತ್ತ್ಯುತ್ತಮವಾದ ರಸ್ತೆ ಅಂದರೆ ಅದೆನೆ. ರಸ್ತೆಯ ಪಕ್ಕದಲ್ಲಿ ಸುಂದರವಾದ ಹಸಿರು ಮರ ಗಿಡಗಳನ್ನ ಬೆಳಸಿದಾರೆ, ( ಇಡೀ ದೇಶದಲ್ಲಿ ಇದೊಂದೆ ರಸ್ತೆ ಹಿಂಗೆ ಹಸಿರು ಹಸಿರಾಗಿ ಇರೊದು ಅನ್ಸತ್ತೆ). ಇಲ್ಲಿಂದ ಮುಂದೆ ಶುರು ಆಗೋದೆ ಬಹ್ರೈನಿನ ಮರುಭೂಮಿ. ( ಹೆಂಗೆ ನೋಡಿದ್ರುನು ನಮ್ಮ ಹಿಂದಿ ಸಿನೆಮಾದಲ್ಲಿ ತೊರ್ಸೊ ಮರುಭೂಮಿ ತರ ಕಾಣ್ಸ್ಲಿಲ್ಲ ಇದು). ಸಕ್ಕತ್ dry ಮರುಭೂಮಿ ಇಲ್ಲಿದು, ಮರಳುಗಾಡು ಅಂತ ಅನ್ನೊಕೆ ಮರಳೇನು ಇಲ್ಲ, ಇರೊದೆಲ್ಲ ಸುನ್ನಕಲ್ಲು ಮಿಶ್ರಿತ ಮಣ್ಣು ಇಲ್ಲಿದು. ಅದಕ್ಕೆ ಇರ್ಬೆಕು ಯಾವಾಗ್ಲು ಬಿಸಿ ಬಿಸಿ ಅಗಿರತ್ತೆ ನೆಲ..

ಹಿಂಗೆ ಮುಂದೆ ಹೊಗ್ತಾ ಇದ್ದಾಗ ಬಹ್ರೈನ್ ವಿಶ್ವ ವಿದ್ಯಾಲಯ ಕಾಣಿಸ್ತು. ನಾವೆನು ಅದ್ರ ಒಳಗೂ ಹೋಗ್ಲಿಲ್ಲ, ಅಕಸ್ಮಾತ್ ಹೋಗಿದ್ರುನು ಉಪಯೋಗ ಎನಿರ್ಲಿಲ್ಲ). ಅಲ್ಲಿಂದನು ಹಂಗೆ ಮುಂದೆ ಹೋದ್ವಿ. ರಸ್ತೆ ಪಕ್ಕದಲ್ಲಿರುವ sign board ಸಹಾಯದಿಂದ ನಾವು ತಲುಪ ಬೇಕಾದ ಸ್ಥಳ First Oil Well of Bahrain ತಲ್ಪಿದ್ವಿ.

ಮೊದಲ ತೈಲ ಬಾವಿ ಪಕ್ಕನೆ Dar An Naft Oil Museum ಇದೆ. ನಮ್ಮ ದುರಾದ್ರುಷ್ಟಕ್ಕೆ ರಮದಾನ್ ಹಬ್ಬದ ಪ್ರಯುಕ್ತ ಅದಕ್ಕೆ ಅವತ್ತು ರಜ. ಆದ್ರೆ ಪಕ್ಕ ಇರೊ First Oil Well ನೋಡೋಕೆ ಸಿಕ್ತು. ಇವಾಗ ಇದ್ರಲ್ಲಿ ಪೆಟ್ರೋಲಿಯಮ್ ಸಿಗದೆ ಇದ್ರುನು, ಬಾವಿಗೆ ಬಹಳ ಮಹತ್ವ ಇದೆ. ಅದೇನು ಅಂದರೆ ಇಡೀ Gulf Regionಗೆ ಇದೇ ಮೊದಲ ತೈಲ ನಿಕ್ಷೇಪ ಅಂತೆ. 1931ನೆ ಇಸ್ವಿ ಅಕ್ತೋಬರ್ ತಿಂಗಳಿನಲ್ಲಿ ಇಲ್ಲಿ ನೆಲ ಕೊರಿಯೊಕೆ ಶುರು ಮಾಡಿದ್ರೆ, 1932ನೆ ಇಸ್ವಿ ಜೂನ್ ತಿಂಗಳಿಗೆ ಕಚ್ಚಾ ತೈಲ ಸಿಕ್ಕಿತಂತೆ. ಅಲ್ಲೆ ಇರುವ ಸಣ್ಣ ಬೊರ್ಡಿನಲ್ಲಿ ಬರೆದಿರೊ ಪ್ರಕಾರ ತೈಲ ಬಾವಿಯಲ್ಲಿ ಗಂಟೆಗೆ 400 ಬ್ಯಾರೆಲ್ ಕಚ್ಚಾ ತೈಲ ಉತ್ಪತ್ತಿ ಮಾಡ್ತಿದ್ರಂತೆ. ಸದ್ಯಕ್ಕೆ ಇದ್ರಲ್ಲಿ ಎನೂ ಸಿಗಲ್ಲ, ಅದಕ್ಕೆ ಇದನ್ನ museum ಮಾಡಿದಾರೆ.

ಇಲ್ಲಿಗೆ ಹೋಗಿದ್ದಕ್ಕೆ ನನ್ಗೆ ಒಂದು ಉಪಯೋಗ ಅಯಿತು. ಮೊದಲಿನಿಂದ ನಾನು ಅಯಿಲ್ ವೆಲ್ ಅಂದರೆ ಹೆಂಗೆಂಗೆ ಇರತ್ತೆ ಅಂತ ಅನ್ಕೊಂಡಿದ್ನೊ ಹಂಗೆ ಇದು ಇರಲ್ಲ ಅನ್ನೋದು ಮನದಟ್ಟಾಯಿತು. ನಮ್ಮೂರಲ್ಲಿ ಸರ್ಕಾರ ತೋಡಿ ಕೊಟ್ಟಿರೊ ಬೋರ್ಗಲ್ ಬಾಮಿಗು ಇದಕ್ಕೂ ಎನೂ ವ್ಯತ್ಯಾಸ ಇರಲ್ಲ. ಅಲ್ಲಿ ಹ್ಯಾಂಡಲ್ ಇರತ್ತೆ, ಇಲ್ಲಿ ಮೋಟಾರ್ ಕೂಡ್ಸಿರ್ತಾರೆ ಅಷ್ಟೆ. ಇವಾಗ ಹೊಸ ಟೆಕ್ನಾಲಜಿ ಉಪಯೊಗಿಸುತ್ತಾರಂತೆ, ಅದೇನು ಅನ್ನೋದು ಗೊತ್ತಾಗ್ಲಿಲ್ಲ ನಂಗೂ.. ಅದ್ರೆ ಇದೇ ತರದ್ದು ಭಾಳಾನೆ ತೈಲ ಬಾವಿಗಳಿವೆ ಇಲ್ಲಿ.

ಇಲ್ಲಿ ಹಾಕಿರೊ ಪೈಪ್ ಗಳನ್ನ ನೋಡಿದ್ಮೇಲೆ ನಮ್ಮೂರಿನ ಭಾಗವತರ ಮನೆ ಪ್ರಶಾಂತಂಗೆ ಇದನ್ನ ತೋರ್ಸ್ಲೇಬೇಕು ಅಂತ ಅನ್ಸ್ತು. ಕಿಲೋಮೀಟರ್ಗಟ್ಲೆ ಪೈಪ್ ಜೋಡ್ಸಿದಾರೆ ಇಲ್ಲಿ. ಪ್ರತಿ oil wellನು oil refinery ಹತ್ತಿರ ಇರೊ Crude Oil Tankಗೆ connect ಮಾಡೋಕೆ ಪೈಪಿನ ವ್ಯವಸ್ತೆ. ಇದನ್ನೆಲ್ಲ ಕಾಯೋಕೆ ಸರ್ಕಾರ police ಸಿಬ್ಬಂದಿನ ನೇಮಕ ಮಾಡಿದೆ. ಅವ್ರು ಜೀಪಲ್ಲಿ ಸುತ್ತಾಡ್ತಾನೆ ಇರ್ತಾರಂತೆ ಇಲ್ಲೆಲ್ಲಾ. ಕಳ್ಳತನದ ಕಾಟ ಇಲ್ಲದೇ ಇದ್ರುನೂ ಏನೂ ಅಪಾಯ ಆಗದೆ ಇರ್ಲಿ ಅಂತ ಅವ್ರುನ್ನ ಇಟ್ಟಿದಾರೆ ಅಷ್ಟೆ.

ನಮಗೆ museum ಒಳಗೆ ಹೋಗೋಕೆ ಆಗದೆ ಇದ್ರುನು, ಒಂದು live oil well ನೋಡೊಕೆ ಸಿಕ್ತು. ನಾವು ಅದ್ರ ಪಕ್ಕ ಹೋಗಿ ನಿಂತು ಒಂದಿಷ್ಟು ಪಟ ತೆಕ್ಕೊಂಡ್ವಿ. oil well technology ಚನಾಗಿತ್ತು. ಅದೇ ಸೆಳೆದಿಟ್ಟ crude oil ಅದು ಉಪಯೋಗ ಮಾಡ್ಕೊಳತ್ತೆ ಇಂಜಿನ್ ರನ್ ಮಾಡೊಕೆ.

ಇಲ್ಲಿಂದ ನಮ್ಮ ಮುಂದಿನ ಪ್ರಯಾಣ Bahrain International Formula One Circuit ಕಡೆಗೆ. ಹಿಂದೆ ಯಾವಾಗಲೋ TVಲಿ ನೋಡ್ತಿದ್ದ ಬಹ್ರೈನ್ ಫ಼ಾರ್ಮುಲ 1 ಅಂಗಣ ಹತ್ತಿರದಿಂದ ನೋಡೋಕೆ ಬಹಳಾನೆ ಚನಾಗಿದೆ. ವರ್ಷಕ್ಕೆ ಒಮ್ಮೆ ಮಾತ್ರ ಇಲ್ಲಿ Formula 1 ರೇಸ್ ನಡಿಯೊದು. ಸೊ.. ನಮಿಗು ಇಲ್ಲಿ ಇವಾಗ ನೋಡೋಕೆ ಎನೂ ಇರ್ಲಿಲ್ಲ. ಆದ್ರೆ ನವೆಂಬರ್ ತಿಂಗಳಲ್ಲಿ ಅದೆನೊ ಒಂದು ರೇಸ್ ನಡಿಯತ್ತಂತೆ, 3 ದಿನ ಇರತ್ತೆ, ಆದ್ರೆ ಒಮ್ಮೆ ಹೋಗಣ ಅಂತ ಅನ್ಕೊಂಡು ಹತ್ತಿರದಲ್ಲಿದ್ದ ಒಂದು tent ಒಳಗೆ ಹೋದ್ವಿ. ಅಲ್ಲಿ ನೋಡಿದ್ರೆ McLaren Mercedes Formula 1 ಕಾರನ್ನೇ ತಂದಿಟ್ಟಿದಾರೆ!! ಇದೆಲ್ಲೋ ಮೋಸ ಅನ್ಕೊಂಡು ಅದನ್ನ ಅನುಮಾನದ ದ್ರುಷ್ಟಿಲೇ ನೋಡಿದ್ರೆ ನಿಜವಾದ ಕಾರನ್ನೆ ಇಟ್ಟಿದಾರೆ!! ಅದ್ರ ಜೊತೆ ಈ ಎಲ್ಲಾ ಕಾರುಗಳ Fansಗೆ ಮಾರೋಕೆ ಅಂತ T-Shirts, Caps, Shoes, ಹಿಂಗೆ ಏನೇನೇನೋ ಇಟ್ಟಿದ್ರು, ಸಿಕ್ಕಾಪಟ್ಟೇ ಕಾಸ್ಟ್ಲಿ ಅಷ್ಟೆ J

ಹೆಂಗು ನಮಿಗೆ ಓಡ್ಸೊಕೆ Formula 1 Car ಸಿಗಲ್ಲ ಇಲ್ಲಿ, ಅದಕ್ಕೆ ಅವ್ರುನು ಸ್ವಲ್ಪ ತಲೆ ಓಡ್ಸಿ Carting ವ್ಯವಸ್ಥೆ ಮಾಡಿದಾರೆ. ನಾವು ತೀರ ಮುಂಚೆ ಹೋಗಿದ್ವಿ, ಅಲ್ಲಿ ಬಾಗಿಲು ಹಾಕಿತ್ತು.. ಅದಕ್ಕೆ ಮತ್ತೆ ಸ್ವಲ್ಪ ಬಿಸ್ಲು ಕಮ್ಮಿ ಆದ್ಮೆಲೆ ಬರಣ ಅಂತ ಮುಂದಿನ ದಾರಿ ಹಿಡಿದ್ವಿ.

ನಮ್ಮ next stop ಇದ್ದಿದ್ದು ಜ಼ಲಾಕ್ ಅನ್ನೊ ಸಮುದ್ರ ತೀರದಲ್ಲಿ. ಹಬ್ಬದ ರಜಗಳ ಸಾಲೇ ಇದ್ದಿದ್ರಿಂದ ಅಲ್ಲಿ ಭಾಳಾನೆ ಜನ ಇದ್ರು. ಕಾಲಿಡೊಕೂ ಜಾಗ ಇರ್ಲಿಲ್ಲ ನಮಿಗೆ ಅಲ್ಲಿ. ಅದಕ್ಕೆ ಅಲ್ಲಿ ಹೆಚ್ಚಿಗೆ ಸಮಯ ಕಳಿಯದೆ ಮುಂದೆ ಹೋದ್ವಿ.

ಅದು ಅಲ್ ಅರೀನ್, ಬಹರೇನ್ ದೇಶದ ಏಕಮಾತ್ರ wildlife park, ಚಿಕ್ಕ ಕಾಡು ಕೂದ ಇದೆ. ಇಲ್ಲಿ ಕೂಡ ಬಹಳಾನೆ ಜನ ಇದ್ರು, ನಾವು ಹೋಗಿದ್ದು ಕೂಡ ಸ್ವಲ್ಪ ಲೇಟ್ ಅಗಿತ್ತು, ನಮಿಗೆ ಹಸಿವು ಕೂಡ ಆಗಿತ್ತು. ಅಲ್ಲೆ ಮರದ ನೆರಳಿನಲ್ಲಿ ಕುಳಿತು ಮನೆಯಲ್ಲಿ ಮಾಡಿದ ಪಲಾವ್ ಮತ್ತು ಮೊಸರನ್ನ, ಜಿಲೇಬಿ ತಿಂದ್ವಿ. ಇಲ್ಲಿಂದ ಮತ್ತೆ ಫ಼ಾರ್ಮುಲ ೧ ಅಂಗಣಕ್ಕೆ ವಾಪಾಸ್ ಬಂದ್ವಿ. ಅಲ್ಲಿ ೧೦ ನಿಮಿಷ cart drive ಮಾಡೊಕೆ ಪ್ರತಿ ತಲೆಗೆ ೫ ದಿನಾರ್ ಕೊಡಬೇಕು. ನಾವು ೩ ಜನ ಮಾತ್ರ ಆಡಿದ್ವಿ, ಲಕ್ಷ್ಮಿ ಮತ್ತೆ ಸುಧಿ shoe ಹಾಕ್ಕೊಂಡಿರ್ಲಿಲ್ಲ ಅಂತ ಅವ್ರಿಗೆ ಆಡೊಕೆ ಬಿಡ್ಲಿಲ್ಲ.

ಆಟ ಆಡಿ ಮುಗಿಸಿದಾಗ ಸೂರ್ಯ ಮುಳುಗಿದ್ದ, ನಮಿಗುನು ಮನೆ ನೆನಪಾಗಿ ವಾಪಾಸ್ ಬಂದ್ವಿ.