2/15/2009 01:02:00 PM

ಬಂಗಾರದ ಬೇಟೆ

ಅದೆನೊ ಗೊತ್ತಿಲ್ಲ, ನಮ್ ಕಡೆ ಎಲ್ಲರೂ ಗಲ್ಫ್ ದೇಶಗಳಲ್ಲಿ ಬಂಗಾರ ಭಾಳಾನೆ ಸೋವಿ ಅಂತ ಹೇಳ್ತಿರ್ತಾರೆ. ಆದ್ರೆ ನಾನು ಒಂದ್ಸಲನು ಅದನ್ನ ಚೆಕ್ ಮಾಡಿರ್ಲಿಲ್ಲ, ಮಾಡೋಕೆ ಇಷ್ಟನು ಇರ್ಲಿಲ್ಲ. ಸುಧಿ ಬಂಗಾರದ ರೇಟ್ ಟ್ರಾಕ್ ಮಾಡ್ತಿರ್ತಾನೆ ಅವಾಗವಾಗ. ಹೆಂಗು ಅವ್ನು ಬಂದಿದ್ನಲ ಬಹರೇನ್ಗೆ, ಈ ಸಲ ಇದನ್ನ ಪರೀಕ್ಷೆ ಮಾಡೇ ಬಿಡಣ ಅಂತ ಮೊನ್ನೆ ಶುಭ ಶುಕ್ರವಾರ ಸುಧಿ ಜೊತೆ ಬೆಳ್ಳಾನ್ ಬೆಳಿಗ್ಗೆ 11 ಗಂಟೆಗೆ ಬಂಗಾರದ ಅಂಗಡಿಗಳಿಗೆ ನುಗ್ಗಿದೆ. ಮೊದಲಿನ ೨-೩ ಅಂಗಡಿಗಳಲ್ಲಿ ಬಂಗಾರದ ರೇಟ್ ಹಾಕಿರ್ಲಿಲ್ಲ. ಹಂಗೆ ಹುಡುಕ್ತಾ ಹೋದಾಗ ಒಂದು ಅಂಗಡಿಲಿ ಬೋರ್ಡ್ ಕಾಣಿಸ್ತು.

22 ct = BD11.600 (ಸುಮಾರು INR1496.4)

24ct = BD 12.200 (ಸುಮಾರು INR1573.8)

ಎಲ್ಲಾ ಅಂಗಡಿಗಳಲ್ಲು ಇದೇ ರೇಟ್ ಇತ್ತು. ವ್ಯವಹಾರಕ್ಕೆ ಕುತ್ಕೊಂಡ್ರೆ ಸ್ವಲ್ಪ ಕಮ್ಮಿ ಮಾಡ್ತಾರೆ ಅಷ್ಟೆ. ಮನೆಗೆ ಬಂದು ಭಾರತದ ಪೇಪರ್ ನೋಡಿದ್ರೆ ಅಲ್ಲೆ ಇನ್ನೂ ಕಮ್ಮಿ ರೇಟ್ ಇತ್ತು. ಅವಾಗ ಅನ್ಸ್ತು ಇಲ್ಲಿ ಬಂಗಾರ ತೊಗೊಳೋದಕ್ಕಿಂತ ವಾಪಾಸ್ ಊರಿಗೆ ಹೋಗಿ ಬಂಗಾರ ತೊಗೋಳೋದೇ ಒಳ್ಳೇದು ಅಂತ, ಅದೂ ಅಲ್ದೆ ಅಲ್ಲಿ ಹಿಂದು ಡಿಸೈನಾದ್ರು ಸಿಗತ್ತೆ, ಇಲ್ಲಿ ಬರೀ ಸಿಕ್ಕಾಪಟ್ಟೆ ದೊಡ್ಡ ದೊಡ್ಡ ಇಸ್ಲಾಮಿಕ್ ಡಿಸೈನಿನ ಒಡವೆನೆ ಜಾಸ್ತಿ.

ಕೊನೆ ಕೊಸರು: ಹಿಂದೆ ಪಚ್ಚಿ ಊರಿಗೆ ಹೋದಾಗ ಅವಳು ಇಲ್ಲಿ ತೊಗೋಂಡಿದ್ದ ಒಂದು ಓಲೆನ ಅವ್ಳ ಅತ್ತೆಗೆ ತೋರ್ಸಿ, Rs6,000 ಆಯಿತು ಅಂತ ಹೇಳಿದಾಳೆ. ಅದಕ್ಕೆ ಅವ್ಳ ಅತ್ತೆ ಹೇಳಿದ್ದು ಹಿಂಗೆ: “ಅವಾಗ ನನ್ ಓರಗಿತ್ತಿ ದುಬಾಯಿಂದ ಆರ್ ಸಾವಿರಕ್ಕೆ ನೆಕ್ಲೇಸೇ ತೊಗೊಂಡು ಬಂದಿದ್ಲು”. ಅವಾಗ ಬಂಗಾರದ ರೇಟ್ ಎಷ್ಟಿತ್ತು ಅಂತ ಮಾತ್ರ ಹೇಳಿರ್ಲಿಲ್ಲ ಅಷ್ಟೆ.