9/20/2008 03:55:00 PM

ವೆಜ್ಜೊ?? ನಾನ್ ವೆಜ್ಜೋ????

ಅದೂ ಒಂದು ಕಾಲ ಇತ್ತು...... ನಾನು ಎನಾದ್ರು ತೊಗೋಳ್ಬೇಕು ಅಂದರೆ ಅದು ಯಾವ ಬ್ರಾಂಡ್, ಎಷ್ಟ್ ದುಡ್ಡಾಗತ್ತೆ, ಎಲ್ಲಿ ಮಾನ್ಯುಫ಼್ಯಾಕ್ಚರ್ ಮಾಡಿದ್ದು ಅಂತೆಲ್ಲಾ ಎನೂ ನೊಡದೆ, ತೊಗೊಳ್ಬೇಕೋ ಬೇಡ್ವೊ ಅಂತನೂ ಯೊಚ್ನೆ ಮಾಡದೆ, ಹಂಗೆ ಸುಮ್ನೆ ತೊಗೋಳ್ತಿದ್ದೆ. ಆದ್ರೆ ಈ ದೇಶದಲ್ಲಿ ಇವಾಗ ಎನಾದ್ರು ತೊಗೊಳ್ಬೆಕು ಅಂದರೆ ೫ ೫ ಸಲ ಯೊಚನೆ ಮಾಡೊಕೆ ಶುರು ಮಾಡಿದಿನಿ...

ಇದ್ರ ಹಿಂದೆ ಹಲವಾರು ಕಾರಣಗಳಿವೆ.... ಮೊದ್ಲು ಎಲ್ಲಿ ಮಾನ್ಯುಫ಼್ಯಾಕ್ಚರ್ ಮಾಡಿದ್ದು ಅನ್ನೋದ್ರ ಬಗ್ಗೆ ಯಾವತ್ತೂ ಯೋಚನೆ ಮಾಡ್ತಿರ್ಲಿಲ್ಲ, ಯಾಕೆಂದ್ರೆ ಎಲ್ಲದನ್ನ ಅಲ್ಲೆ ಬೆಂಗಳೂರಿನ ಹತ್ತಿರನೇ ಎಲ್ಲಾದ್ರು ಮಾನ್ಯುಫ಼್ಯಾಕ್ಚರ್ ಮಾಡಿರ್ತಾರೆ ಅಂತ ಗ್ಯಾರಂಟಿ ಇರ್ತಿತ್ತು. ಅದ್ರೆ ಇಲ್ಲಿಗೆ ಬಂದಮೇಲೆ ಎಲ್ಲಾದ್ರಲ್ಲೂ MADE IN INDIA ಅನ್ನೋ label ಇದ್ಯಾ ಅಂತ ಹುಡುಕೋಕೆ ಶುರುಮಾಡಿದಿನಿ. ಆದ್ರೆ ಅದು ಸಿಗೊದು ಭಾಳನೆ ಕಮ್ಮಿ..

ಭಾರತದಲ್ಲ್ಲಿ ತಿನ್ನೊ ವಸ್ತುಗಳಮೇಲೆ ಹಸಿರು ಅಥವ ಕಂದು ಬಣ್ಣದ ಚುಕ್ಕೆ ಇರ್ತಿತ್ತು, ಅದ್ರಿಂದ ಭಾಳನೆ ಅರಾಮಾಗಿ ಗೊತ್ತಾಗ್ತಿತ್ತು ಅದು ವೆಜ್ಜೊ ಅತ್ವ ನಾನ್-ವೆಜ್ಜೊ ಅಂತ.... ಇಲ್ಲ್ಲಿ ಹಂಗೆಲ್ಲ ಎನ್ ಮಾರ್ಕೂ ಇರಲ್ಲ..( ಅದ್ರೆ ನಮ್ ದೇಶದಿಂದನೇ ಇಂಪೋರ್ಟ್ ಮಾಡ್ಕೊಂಡಿರೊದಾದ್ರೆ ಮಾತ್ರ ಮಾರ್ಕ್ ಇರತ್ತೆ) ಇಲ್ಲಿ ವೆಜ್ಜು ನಾನ್ ವೆಜ್ಜು ಎಲ್ಲಾದನ್ನೂ ಒಟ್ಟಿಗೆ ಇಟ್ಟಿರ್ತಾರೆ.... ಪ್ರತಿಯೊಂದು ಪ್ಯಾಕಿನ ಹಿಂದೆ ಬರ್ದಿರ್ತಾರಲ ಅದನ್ನ ಓದಿದ್ರೆ ಮಾತ್ರ ಗೊತ್ತಾಗತ್ತೆ ಅದು ವೆಜ್ಜೊ ನೊನ್ವೆಜ್ಜೊ ಅಂತ.. ಎಲ್ಲಿ ಮಾನ್ಯುಫ಼್ಯಾಕ್ಚರ್ ಮಾಡಿದ್ದು, ಎನೇನ್ ಹಾಕಿದಾರೆ ಅನ್ನೊದನ್ನೆಲ್ಲಾ ಓದಿ, ಆಮೇಲೆ ಅರ್ಧಘಂಟೆ ಯೋಚನೆ ಮಾಡಿ, ತೊಗೊಳ್ಬೆಕೋ ಬೇಡ್ವೋ ಅಂತ ದೆಸೈಡ್ ಮಾಡೊ ಹೊತ್ತಿಗೆ ಭಾಳಾನೇ ಸುಸ್ತಾಗತ್ತೆ, ಪ್ರತೀ ಕೌಂಟರ್ ಮುಂದೆನು ಇದನ್ನೆ ಮಾಡೊ ಪರಿಸ್ಥಿತಿ ಉಂಟಾಗಿದೆ.. ಇಲ್ಲಿ ಜೀವನ ಶಾನೆ ಕಷ್ಟ ಕಣಣ್ಣೊ...

ಅಯ್ಯೊ ಇನ್ನೊಂದ್ ವಿಚಾರಾನೆ ಹೇಳೊಕೆ ಮರ್ತಿದ್ದೆ.. ಇಲ್ಲಿ ಕೆಲವು ಬೇಕರೀಲಿ ಎಲ್ಲಾದಕ್ಕೂ ಮೊಟ್ಟೆ ಹಾಕ್ತಾರಂತೆ, ಅರಾಮಾಗಿ ಬ್ರೆಡ್ ಕೂಡ ತಿನ್ನೊಕೆ ಆಗಲ್ಲ, ಎಲ್ಲಾದನ್ನೂ ೩ ೩ ಸಲ ಕೇಳಿ ಕನ್ಫ಼ರ್ಮ್ ಮಾಡ್ಕೊಂಡು ತೊಗೊಳ್ಬೇಕು, ಇಲ್ಲಿ ಬೇಕರಿಲಿ ಸಮೊಸ, ಪಕೋಡ, ಕಾರ ಸೇವ್ ಹಿಂಗೆ ಎನೇನೆಲ್ಲ ಮಾರ್ತಾರೆ, ಆದ್ರೆ ಅದನ್ನ ತಿನ್ನೊಕೆ ಮನಸ್ಸು ಬರಲ್ಲ ಅಷ್ಟೆ. ಯಾಕೆಂದ್ರೆ ಅಲೂ ಸಮೊಸ ಜೊತೆ ಖೀಮಾ ಸಮೊಸ ಕೂಡ ಒಟ್ಟೀಗೆ ಮಾಡ್ತಾರೆ......ವೆಜ್ ಪಫ಼್ ಜೊತೆ ಚಿಕನ್ ಪಫ಼್... ಅಲ್ಲಿಗೆ ನಮ್ ಬೇಕರಿ ವ್ಯವಹಾರ ಮುಗಿತು...

ನಿನ್ನೆ ಬೆಳಿಗ್ಗೆ sandwich ತಿನ್ಲೇಬೇಕು ಅಂತ ಅನ್ಸಿಬಿಡ್ತು. ಸರಿ ಹಂಗಾದ್ರೆ ಬೇಕಾಗಿರೊ ಸಾಮಾನೆಲ್ಲ ತರಣ ಅಂತ ಮನೆ ಹತ್ತಿರಾನೆ ಇರೊ ನಮ್ಮ Food World ತರದ್ದು ಅಂಗಡಿ Ashwaq Al-Heiliಗೆ ಹೋದೆ, ಎಲ್ಲಾ ತರಕಾರಿ, ಸೊಪ್ಪು ತೊಗೊಂಡು, Dairy Counterಗೆ ಬಂದೆ, ಅಲ್ಲಿ ಸಿಕ್ಕಾಪಟ್ಟೆ ತರದ್ದು chees ಇಟ್ಟಿದ್ರು.. ಹಿಂದೆ ಒಂದ್ಸಲ ನಮ್ ಪ್ರಶಾಂತ್ ಪಂಡಿತರು ಹೇಳಿದ್ದು ನೆನಪಯಿತು.. ಚೀಸ್ ಕೂಡ ನಾನ್ ವೆಜ್ ಅನ್ನೋದು.... ಸರಿ ಮತ್ತೆ ಅಲ್ಲಿ ನನ್ research ಶುರ್ ಅಯಿತು, pack ಹಿಂದೆ ನೋಡಿದ್ರೆ ಹಾಕಿರೊ ವಸ್ತುಗಳಲ್ಲಿ Natural Rennet from Calf ಅಂತ ಬರ್ದಿದ್ರು... ಮತ್ತೆ ಏನಪ್ಪ ಇದು ಗೋಳು ಅಂತ ಅದನ್ನ ತೊಗೊಳ್ದೆ ಮನೆಗ್ ಬಂದು internet ಒಳಗೆ ಹುಡುಕಿದೆ, ಅವಾಗ ಗೊತ್ತಾಗಿದ್ದು ಇಷ್ಟು.. ಈ ಚೀಸ್ ಅನ್ನೊದನ್ನ ಮಾಡೊಕೆ ಇನ್ನು ಹಾಲು ಕುಡಿಯುವ ಚಿಕ್ಕ ಆಕಳು ಕರುವಿನ ಜಟರದಿಂದ ( ತೀರ ತಿಳಿಲಿಲ್ಲ ಅನ್ನೊರಿಗೆ ಕರು ಹೊಟ್ಟೆಯಿಂದ) ತೆಗ್ಯೊ rennet ಬೇಕಾಗತ್ತಂತೆ.. ಅಲ್ಲಿಗೆ ಚೀಸ್ ಹಾಕಿ sandwich ಮಾಡೊದನ್ನ ಬಿಟ್ಟು, ಹಂಗೆನೆ ತರಕಾರಿ sandwich ಮಾಡಿದೆ..

9/05/2008 11:02:00 PM

ನಾನು ಕಂಡ ಬಹ್ರೈನ್ 2

ಯಾಕೋ ಏನೋ ಗೊತ್ತಾಗ್ತಿಲ್ಲ, ನಮ್ಮ weekend ಪ್ಲಾನ್ಗಳು ಪ್ರತಿ ವಾರನು ಎಕ್ಕುಟ್ಟಿ ಹೋಗ್ತಿವೆ :( ಕಳೆದವಾರ ನಮ್ಮ ಮನೆ ಹತ್ತಿರಾನೆ ಇರೋ ಬಹ್ರೈನ್ ಕೋಟೆ ಮತ್ತು ಸಮುದ್ರ ನೋಡೋಕೆ ಹೋಗಾಣ ಅಂತ ಹೊರಟ್ವಿ. ಆದ್ರೆ ನಡಿತಾ ನಡಿತಾ ಗೊತ್ತಾಯಿತು, ಅದು ನಮ್ಮ ಮನೆಯಿಂದ ಭಾಳನೆ ದೂರ ಇದೆ ಅಂತ. ಅರ್ಧ ದಾರಿ ನಡ್ಕೊಂಡು ಹೊದೊವ್ರು ಮತ್ತೆ ವಾಪಾಸ್ ಬಂದು ಮನೆ ಹತ್ತಿರ ಇರೋ ಶಾಪಿಂಗ್ ಮಾಲ್ಗೆ ಹೊದ್ವಿ.

ಈ ವಾರ ದೇಶದ ದೊಡ್ಡ ಮಸೀದಿ ನೋಡಣ ಅಂತ ಹೊರಟ್ವಿ. ಕಾರ್ಸ್ ಹತ್ತಿ ಹೋದರೆ, ಎಲ್ಲಿ ಇಳಿಬೇಕು ಅನ್ನೋದೇ ತಿಳಿಲಿಲ್ಲ, ಬಸ್ ಮಾತ್ರ ಹೋಗ್ತಾನೆ ಇತ್ತು, ಕೊನೆಗೆ ನಮಿಗೆ ಗೊತ್ತಿರೋ ಒಂದು ಜಾಗಕ್ಕೆ ಅದು ಬಂದಾಗ ಇಳ್ಕೊಂಡ್ವಿ, ಮತ್ತೊಂದ್ ವೀಕ್ ಎಂಡ್ ಬಗೆ ಹರಿತು. ಆದ್ರೆ ಅದರಿಂದ ಒಂದು ಉಪಕಾರನು ಆಯಿತು. ಏನು ಅಂತ ಹೇಳ್ತೀನಿ ಇರಿ....

ನಾವು ಬಸ್ ಇಳಿದ ಜಾಗದ ಹತ್ತಿರಾನೆ ಬಹ್ರೈನ್ ಕನ್ನಡ ಸಂಘ ಇತ್ತು. ಮೊದಲು ಅಲ್ಲಿಗೆ ಹೋದಾಗೆಲ್ಲಾ ಮುಚ್ಚಿದ ಬಾಗಿಲನ್ನ ನೋಡ್ಕೊಂಡು ವಾಪಸ್ ಬರತಿದ್ವಿ. ಇದೇ ಕೊನೆಯ ಟ್ರೈ ಅಂತ ಒಮ್ಮೆ ಒಳಗೆ ಹೋಗಿ ನೋಡಿದ್ರೆ, ಬಾಗ್ಲು ತೆಗ್ದಿತ್ತು, ಒಬ್ನು ಮೀನು ಹಿಡಿತಾ ನಿಂತಿದ್ದ (ಸಮುದ್ರದಲ್ಲಿ ಅಲ್ಲ,ಮೀನಿನ ತೊಟ್ಟಿಲಿ). ಅವನನ್ನ ಕೆಲನ ಅಂತ ನೋಡಿದ್ರೆ ಆ ಮುಂಡೆದಕ್ಕೆ ಕನ್ನಡನೆ ಬರಲ್ಲ, ಆದ್ರೆ ಅವ್ನೆ ಕನ್ನಡ ಸಂಘದ ಮೊದಲ ಕೆಲಸಗಾರ ಅಂತೆ........

ಕೊನೆಗೆ ಒಬ್ಬರು Bahrain Defence Force (ಬಹ್ರೈನ್ ಸೈನ್ಯ)ಗೆ ಕೆಲಸ ಮಾಡುತ್ತಿರುವ ಮಂಗಳೂರಿನ ಶೆಟ್ಟಿ ಅನ್ನೋರು ಸಿಕ್ರು. ಪಾಪ ಅವರೇ ನಾವು ಸಂಘದ ಸದಸ್ಯರಾಗೊದಿಕ್ಕೆ ಏನ್ ಮಾಡ್ಬೇಕು ಅಂತ ಎಲ್ಲ ಹೇಳಿದ್ರು. ಅವರೇ ಅಪ್ಲಿಕೇಶನ್ ಕೊಡಿಸಿ, ಪೆನ್ ಕೊಟ್ಟು, ಏನ್ ಬರೀಬೇಕು ಅಂತಾನು ಹೇಳಿದ್ರು. ನಾನು ತುಂಬಿದ ಅಪ್ಲಿಕೇಶನ್ ನೋಡಿ, 2 ಜನ ಸಾಕ್ಷಿ ಬೇಕು ಅಂತ ಕೇಳ್ಬಿಟ್ರು......

ಈ ದೇಶದಲ್ಲೇ ಯಾರು ನಮಿಗೆ ಗೊತ್ತಿಲ್ಲ, ಇನ್ನು ಸಾಕ್ಷಿ ಎಲ್ಲಿಂದ ಹುಡುಕ್ಕೊಂಡ್ ಬರಲಿ ಅಂದೆ ಅವ್ರಿಗೆ, ಅವಾಗ ಅವ್ರು ನನ್ನ ಪರವಾಗಿ ಸಾಕ್ಷಿಗೆ ಸೈನ್ ಮಾಡಿದ್ರು, ಮತ್ತೊಂದು ಸಾಕ್ಷಿಗೆ ಇನ್ನೊಬ್ರು ಶೆಟ್ಟಿ ಅನ್ನೋರನ್ನ ಹುಡುಕ್ಕೊಂಡ್ ಬಂದ್ರು. ಕೊನೆಗೆ ಗೊತ್ತಾಯಿತು, ಅಲ್ಲಿ ಇರೋ ಸದಸ್ಯರಲ್ಲಿ ಬಹಳ ಜನರ ಹೆಸರು ಶೆಟ್ಟಿ ಅಂತಾನೆ ಅಂತ... ಮುಂದಿನ ಮೀಟಿಂಗ್ ಒಳಗೆ, ನಮ್ಮ ಅಪ್ಲಿಕೇಶನ್ ಬಗ್ಗೆ ಚರ್ಚೆ ಮಾಡಿ, ನಂತರ ಉಳಿದ directors ಒಪ್ಪಿದರೆ ನಮಿಗೆ ಸದಸ್ಯತ್ವ ಕೊಡ್ತಾರಂತೆ, ಅದಕ್ಕೆ ಇನ್ನೆಷ್ಟ ದಿನ ಬೇಕೋ ಏನೋ!! ಆದರೆ ಸದಸ್ಯತ್ವದ ಅಪ್ಲಿಕೇಶನ್ ಕೊಟ್ಟಿದ್ದಕ್ಕೆ ಒಂದು ಉಪಯೋಗ ಆಯಿತು.

ನಾವುನು ಬೇಕಾದ್ರೆ ಅಲ್ಲಿಗೆ ವಾರದ ಕೊನೆಗೆ ಹೋಗಿ, ಅಲ್ಲಿನ ಜನರ ಜೊತೆ ಬೆರಿಬೊದಂತೆ. ಕನ್ನಡ ಸಂಘದಲ್ಲಿ ಫ್ಯಾಮಿಲಿ ಕೇರಂ, ಫ್ಯಾಮಿಲಿ darts, ಕ್ರಿಕೆಟ್ ಎಲ್ಲ ಆಡ್ತಾರಂತೆ (ನಾವು ಹೋದಾಗ ಎಲ್ಲಾ darts ಆಡೋಕೆ ರೆಡಿ ಆಗ್ತಿದ್ರು). ಒಂದು ಚಿಕ್ಕ ಲೈಬ್ರರಿ ಇದೆ, ಕನ್ನಡ, ಹಿಂದಿ, ಇಂಗ್ಲಿಷ ಪುಸ್ತಕಗಳು ಸಿಗುತ್ವೆ, ಓದೋಕೆ ಇಷ್ಟ ಇದ್ರೆ ಪ್ರತಿ ಮಂಗಳವಾರ ಹೋಗಬೇಕಂತೆ. ಲೈಬ್ರರಿ ನೋಡ್ಕೊಳೋರು ವಾರಕ್ಕೆ 2 ಬುಕ್ ಕೊಡ್ತಾರಂತೆ. ಎಲ್ಲ ಇಂಡಿಯನ್ newspapers ಸಿಗತ್ತೆ ಅಲ್ಲಿ, (ಉದಯವಾಣಿ, ಹಾಯ್ ಬೆಂಗಳೂರು, ಲಂಕೇಶ್, Times of India, Gulf Daily News...). ಒಂದು ಪ್ರಾಬ್ಲಮ್ ಎನೂ ಅಂದ್ರೆ ಈ ಕನ್ನಡ ಸಂಘ ಓಪನ್ ಆಗೋದು ಸಂಜೆ 7 ಗಂಟೆ ನಂತರನೆ ಅಂತೆ. ಎಲ್ಲ ಪ್ರೋಗ್ರಾಮ್ಸ್ ಶುರು ಅಗೊಷ್ಟ್ರಲ್ಲಿ 8 ಗಂಟೆ ಆಗಿರತ್ತೆ. ನಮ್ಮ ಹಳ್ಳಿಗೆ ಕೊನೆ ಬಸ್ ಇರೋದು 9.30ಗೆ.. ಮೋಸ್ಟ್ಲಿ ನಮಿಗೆ ಎಲ್ಲ ಪ್ರೋಗ್ರಾಮ್ಸ್ ಅಟೆಂಡ್ ಮಾಡೋಕೆ ಆಗಲ್ಲ ಅಂತ ಕಾಣ್ಸತ್ತೆ. ನೋಡಣ ಏನಾಗತ್ತೆ ಮುಂದೆ ಅಂತ..

ಹೇಳೋಕೆ ಮರ್ತಿದ್ದೆ, ಮೊತ್ತ ಮೊದಲನೆ ಬಾರಿಗೆ ಬಹ್ರೈನಲ್ಲಿ Filter Coffee ಕುಡ್ಯೋ ಯೋಗ ಬಂತು ನಿನ್ನೆ. ಕನ್ನಡ ಸಂಘದ ಹತ್ತಿರ Indian Club ಅಂತ ಇದೆ ( ನಂಗೆ ಸಿಕ್ಕಿರೋ ಮಾಹಿತಿ ಪ್ರಕಾರ ಈ ಇಂಡಿಯನ್ ಕ್ಲಬ್ ಒಳಗೆ ಇರೋದೆಲ್ಲ ಮಲ್ಲುಗಳಂತೆ, so, too much ಮಲ್ಲು politics ಅಂತೆ ಅಲ್ಲಿ). ಈ ಇಂಡಿಯನ್ ಕ್ಲಬ್ ಎದರು ಸಂಗೀತ ಅಂತ ಒಂದು ಸೌತ್ ಇಂಡಿಯನ್ ಹೋಟೆಲ್ ಇದೆ (ಪಕ್ಕಾ ಮದ್ರಾಸಿ ಹೋಟೆಲ್ ಅದು). ಈ ಹೋಟೆಲ್ ಫಿಲ್ಟರ್ ಕಾಫಿ ಸರ್ವ್ ಮಾಡತ್ತೆ.. ಅಬ್ಬ ಎಷ್ಟ್ ದಿನ ಆಗಿತ್ತು ಒಂದು ಒಳ್ಳೆ ಕಾಫಿ ಕುಡಿದು, 250 ಫಿಲ್ಸ್ ಕೊಟ್ಟು ಒಂದು ಕಾಫಿ ತೊಗೊಂಡು ಕುಡ್ಕೊಂಡ್ ಬಂದ್ಮೇಲೆ ಭಾಳನೆ ಖುಷಿ ಆಯಿತು, ಮನಸ್ಸಿಗೂ ಸಮಾಧಾನ ಆಯಿತು. ಸ್ಟೋರಿ ಈಲ್ಲಿಗೆ ಮುಗಿಲಿಲ್ಲ, ನಮ್ಮ ಮನೆವ್ರು ಹೋಟೆಲ್ ಹುಡ್ಗನ್ನ ಕೇಳೆ ಬಿಟ್ರು ಕಾಪಿ ಪುಡಿ ಎಲ್ಲಿ ಸಿಗತ್ತೆ ಅಂತ (ಹಿಂಗೆ ಹೊರಗೆ ಹೋದಾಗೆಲ್ಲ ಏನಾದ್ರು ಒಂದು ಕೇಳ್ತಾನೇ ಇರ್ತಾರೆ ;) 3 ವಾರದ ಹಿಂದೆ ICICI ಬ್ಯಾಂಕ್ ಗೆ ಹೋದಾಗ ಅಲ್ಲಿರೋ ಕನಡದ ಶೆಟ್ರು ಹುಡ್ಗೀನ ಮಾತಾಡ್ಸಿ Indian Beauty parlour ಎಲ್ಲಿದೆ ಅಂತ information ಎತ್ಕೊಂಡ್ ಬಂದಿದ್ರು...)

ಲಾಸ್ಟ್ ಅಪ್ಡೇಟ್:
ಸುಧಿಯ ಹಳೆ ರೂಮ್ ಮೇಟ್ ಒಬ್ರು ಬಂದಿದ್ದಾರೆ ಬೆಂಗಳೂರಿಂದ, ಅವ್ರು ನಮಿಗೆ ಕಾಫಿ ಫಿಲ್ಟರ್ ಮತ್ತೆ ಒಂದು KG ಕಾಫಿ ಪುಡಿ ತಂದಿದರೆ :) ಇನ್ಮೇಲೆ ಮನೇಲೆ ಕಾಫಿ ಮಾಡ್ತಿವಿ, ನೀವು ನಮ್ಮ ಮನೆಗೆ ಬನ್ನಿ ಕಾಫಿ ಕುಡಿಬೇಕು ಅಂತ ಅನ್ಸಿದಾಗೆಲ್ಲ :) ಎನೂ ಒಟ್ನಲ್ಲಿ ನಮಿಗೆ ಇನ್ನೊಬ್ರು ಕನ್ನಡದೋರು ಮಾತಾಡೋಕೆ ಸಿಕ್ಕಹಾಗೆ ಆಯಿತು ಈ ದೇಶದಲ್ಲಿ.

9/05/2008 01:12:00 AM

ನಾನು ಕಂಡ ಬಹ್ರೈನ್ 1

ಬಹ್ರೈನ್.... ಸೌದಿ ಅರೇಬಿಯಾದ ಮರುಭೂಮಿಯ ಪಕ್ಕದಲ್ಲೇ ಇರೋ ಒಂದು ಸಣ್ಣ ದ್ವೀಪ ರಾಷ್ಟ್ರ. ವಿಸ್ತಾರದಲ್ಲಿ ನಮ್ಮ ಬೆಂಗಳೂರಿಗಿಂತ ಸ್ವಲ್ಪ ಸಣ್ಣಕೆ ಇದೆ, ಆದ್ರೆ ಬೆಂಗಳೂರಿನಷ್ಟು ಚನ್ನಾಗಿಲ್ಲ (ಹಂಗಂತ ನಂಗೇನ್ ಇಲ್ಲಿಗೆ ಬಂದಿದ್ದು ಬೇಜಾರಾಗಿಲ್ಲ, ಪಾಪ ನನ್ ಹೆಂಡತಿಗೆ ಬೇಜಾರಾಗಿದೆ ಅಷ್ಟೆ, ಅವಳ ಪ್ರಕಾರ ಇಷ್ಟೇ ದೊಡ್ದದಗಿರೋ ಸಿಂಗಪುರಕ್ಕೆ ಹೋಗ್ಬೇಕಿತ್ತಂತೆ). ಹಂಗೇ ನೋಡ್ತಿದ್ರೆ ನಮ್ಮ ಶಿವಾಜಿ ನಗರ ಇದ್ದಹಾಗೆ ಇದೆ ಈ ದೇಶ :)

ಒಟ್ಟಾರೆ ಈ ದೇಶದಲ್ಲಿ ಸುಮಾರು ೭.೫೦ ಲಕ್ಷ ಜನ ಇದಾರಂತೆ, ಆದ್ರೆ ಅದ್ರಲ್ಲಿ ಅರ್ಧಕ್ಕಿಂತ ಜಾಸ್ತಿ expats ಇದಾರೆ. ಬಹರೈನಿಗಳು ಕೂಡ ಒಳ್ಳೆ ಜನಾನೇ, ಹೆಚ್ಗೆ ತೊಂದರೆ ಕೊಡಲ್ಲಂತೆ. ಭಾರತದ ತರಹನೇ ದೇಶ ಬಹಳ ಶ್ರೀಮಂತ ಅದರೂ ಜನ ಬಡವರೇ. ಕೆಲವೇ ಕೆಲವು ಜನರ ಹತ್ತಿರಾನೆ ಎಲ್ಲ ದುಡ್ಡು ಸೇರ್ಕೊಂಡಿರೋ ತರ ಇದೆ.

ದೇಶದಲ್ಲಿ ಟ್ಯಾಕ್ಸ್ ಇಲ್ಲದೆ ಇರೋದ್ರಿಂದ ಕೆಲವೊಂದು items ಭಾಳನೆ cheap ಆಗಿ ಸಿಗತ್ತೆ. ವಿಶ್ವದಾದ್ಯಂತ ಮಾಡೋ ಎಲ್ಲಾ ಕಾರುಗಳು ಇಲ್ಲಿ ಭಾಳನೆ ಕಮ್ಮಿ ರೇಟ್ಗೆ ಸಿಗತ್ತೆ. ಅದಕ್ಕೆ ಊರಿನ ತುಂಬಾ ಬರೀ ಕಾರುಗಳೇ ಕಾಣಿಸ್ತಾವೆ.

ಬಡಬಗ್ಗರಿಗೆ, ಬೇರೆ ದೇಶದಿಂದ ಬಂದ ಕೂಲಿ ಕಾರ್ಮಿಕರಿಗೆ ಅಂತಾನೆ ಸರಕಾರ ಬಸ್ ವ್ಯವಸ್ಥೆ ಮಾಡಿದೆ, ಆದ್ರೆ ಅದೇನು ಬಹಳ ಚನ್ನಾಗಿಲ್ಲ. ಕೆಲವೊಂದಿಷ್ಟು ಜಾಗಗಳಿಗೆ ಮಾತ್ರ ಹೋಗುತ್ತವೆ ಅಷ್ಟೆ.



ಬಹರೈನಿನ ಬಡವರ car ಅಂದರೆ Cars, ಬಹರೈನಿನ ಸಾರ್ವಜನಿಕ ಸಾರಿಗೆ. ಪಕ್ಕದಲ್ಲಿರೋದು ದೊಡ್ಡ ಬಸ್, ಇದು ಯಾರನ್ನು ಕಾಯಲ್ಲ, ಸುಮ್ನೆ ಹೋಗ್ತಿರತ್ತೆ ಅಷ್ಟೆ.

ಕೆಳಗೆ ಕೊಟ್ಟಿರೋ ಇನ್ನೊಂದು ಚಿಕ್ಕ ಬಸ್ ಎಲ್ಲರಿಗೋಸ್ಕರ ಕಾಯತ್ತೆ, ಪ್ರಯಾಣಿಕರು ಎಷ್ಟೇ ದೂರದಿಂದ ನಡ್ಕೊಂಡು ಬರ್ತಿದ್ರುನು, ಅವ್ರು ಬಂದು ಬಸ್ ಹತ್ತೊವರೆಗೂ ಕಾಯ್ತಿರತ್ತೆ..

9/04/2008 01:31:00 PM

ಹಿಂಗೆ ಒಂದಿಷ್ಟು Updates

ಬೆಂಗಳೂರಿನಿಂದ ಹರಿ ಹೇಳಿದ್ದು:


ಸಲಾಂ,

ಮತ್ತೆ ಗೌರಿ ಗಣೇಶ ಹಬ್ಬದ ವಾಸನೆಯು ಇಲ್ಲದೆ ನೀನು ಶರೀರವನ್ನು ಕಳೆದು ಕೊಂಡ ಆತ್ಮದಂತೆ ಆಗಿದ್ದೀಯ, ಇರಲಿ... ನಿನಗೆ ಒಂದು ಬಿಸಿ ಸುದ್ದಿ....

ಈ ಬಾರಿ ಬೆಂಗಳೂರಿನಲ್ಲಿ ಕೂಡ ಗಣಪತಿಯನ್ನು ಬೀದಿ ಬೀದೀಲಿ ಇಟ್ಟು traffic jam ಮಾಡಲು ಚಾನ್ಸ್ govt ಕೊಡಲಿಲ್ಲ....ಹಾಗಾಗಿ 20 ವರುಷದಿಂದ ಯಾರು ಸತತವಾಗಿ ಗಣಪನನ್ನು ಇಡುತ್ತಿದ್ದಾರೋ ಆ youth ಕ್ಲಬ್u ಗಳಿಗೆ ಮಾತ್ರ chance ಕೊಟ್ಟಿದ್ದಾರೆ... ಇದು BJP Govt. ಕೊಡುಗೆ...

ಮತ್ತೇ low lying areas ಎಲ್ಲ flood ಆಗಿ ಜನರು ಬೆಂಗಳೂರಿನಲ್ಲಿ boatನಲ್ಲಿ ಪ್ರಯಾಣ ಮಾಡುತ್ತಿದ್ದಾರೆ...

ಸಧ್ಯಕ್ಕೆ ಇಷ್ಟು ಸಾಕು

ಮತ್ತೇ ಸಲಾಂ ಅಲೆಕುಂ ಹರಿ ಚೇತನ್


ನನ್ ಕಡೆ ಇಂದ ಒಂದಿಷ್ಟು updates:

ನನ್ನ ದೋಸ್ತು ಹರಿಚೇತನ್ ಕೊನೆಗೂ ಅಮ್ಫಿ ಮೇಲೆ ಮಾಡುತ್ತಿದ್ದ ಸತತ ದಂಡಯಾತ್ರೆಯನ್ನು ಕೊನೆಗೊಳಿಸಿದ್ದಾನೆ. ಎಲ್ಲರು ಕಣ್ಣರಳಿಸುವಂತೆ ಅಮ್ಫಿ ಯ ಮೇಲೆ ದಿಗ್ವಿಜಯವನ್ನು ಸಾಧಿಸಿ, SBIMFಗೆ ಹೆಮ್ಮೆ ತಂದಿದ್ದಾನೆ. ಅವನಿಗೆ ನಮ್ಮ ಶುಭಾಶಯಗಳು:)

ಮೊನ್ನೆ ನನ್ನ ಇನ್ನೊಬ್ಳು ದೋಸ್ತು ಶ್ವೇತ ಪಂಡಿತ್ ತಮ್ಮ ಹುಟ್ಟು ಹಬ್ಬವನ್ನು ಅಮೆರಿಕದಲ್ಲಿ ಆಚರಿಸಿಕೊಂಡರು, ಅವಳಿಗೂ ನಮ್ಮ ಶುಭಾಶಯಗಳು.

ಸೌದಿಯಿಂದ ಸುಧಿ ಹೇಳಿದ್ದು:

ಅವನು ಕೆಲಸ ಮಾಡೋ ಕಂಪನಿಲಿ expatsಗೆ ಪಾಪದ ಕೋಣೆ (Sin Room) ಕೊಟ್ಟಿದ್ದಾರಂತೆ, ಅದೇನ್ ಪಾಪ ಮಾಡ್ತಾರೋ ಗೊತ್ತಿಲ್ಲ. ಅಲ್ಲಿ ಕೆಲಸ ಮಾಡೋ ಎಲ್ಲ non-muslims ಅದೇ ಪಾಪದ ಕೋಣೆಲಿ ಪಾಪದ ಕೆಲಸಗಳನ್ನ ಮಾಡ್ತಾರಂತೆ ( ಎಂತ ಪಾಪ ಅಂತ ಮಾತ್ರ ಕೇಳಬೇಡಿ).

ಸೆಂಟ್ರಲ್ ಮಾರ್ಕೆಟ್ ಸತ್ಯ ಹೇಳಿದ್ದಿಷ್ಟು:

ನಮ್ಮ ಸತ್ಯ ಕೆಲಸ ಮಾಡೋ ಸೆಂಟ್ರಲ್ ಮಾರ್ಕೆಟಲ್ಲಿ ಇರಾನಿಗಳು ಕೋಕಾಕೋಲನು ಕುಡಿತಾರಂತೆ, ಮದ್ಯಾಹ್ನ ಸಂಬೂಸನು (ಸಮೋಸ) ತಿಂತಾರಂತೆ. ದೇಶದಲ್ಲಿರೋ ಎರಡೇ ಎರಡು ಮದ್ಯದ ಅಂಗಡಿಗಳು ಮುಚ್ಚಿದಾರಂತೆ ಸದ್ಯಕ್ಕೆ, ದೇಶದ ಕುಡುಕರಿಗೆಲ್ಲ ಶಾನೆ ಕಷ್ಟ ಆಗ್ಬಿಟ್ಟಿದೆ.. ಪಾಪ... ಪಾಪ... ಛೆ... ಛೆ... ಕಷ್ಟ....ಕಷ್ಟ...

9/03/2008 04:45:00 PM

ರಮದಾನ್ ಮುಬಾರಕ್

ಸಲಾಂ ಆಲೇಕುಂ, ನಮಸ್ಕಾರ,

ಮೊಟ್ಟ ಮೊದಲನೆ ಬಾರಿಗೆ ನಾನು ಅರಬರ ದೇಶದಲ್ಲಿ ರಮಾದಾನ್ ತಿಂಗಳು ಕಳಿಯುತ್ತಿದ್ದೇನೆ. ಭಾರತದಲ್ಲಿ ಇದ್ದಾಗ ಅಷ್ಟೊಂದು ಗೊತ್ತಾಗ್ತಿರಲಿಲ್ಲ ಇದರ ಬಗ್ಗೆ. ಇಲ್ಲಿಗೆ ಬಂದಮೇಲೆ ಅದರ ಬಗ್ಗೆ ಸ್ವಲ್ಪಸ್ವಲ್ಪವಾಗಿ ಗೊತ್ತಾಗ್ತಿದೆ. ಇಲ್ಲಿನ ಮುಸಲ್ಮಾನರು ಬೆಳಿಗ್ಗೆ 4 ಗಂಟೆ ಇಂದ ಸಂಜೆ 6 ಗಂಟೆ ವರೆಗೂ (ಅಂದರೆ ಸೂರ್ಯೋದಯದಿಂದ ಸೂರ್ಯಸ್ತದವರೆಗೆ) ಉಪವಾಸ ಇರ್ತಾರೆ. ಬೆಳಿಗ್ಗಿನ ಪ್ರಾರ್ಥನೆ ಮುಗಿಸಿ, ಊಟ ಮಾಡಿದರೆ ಮತ್ತೆ ತಿನ್ನೋಕೆ ಅವಕಾಶ ಇರೋದು ಸಂಜೆಯ ಪ್ರಾರ್ಥನೆ ಆದನಂತರವೇ.

ನಮ್ಮ ಕಛೇರಿಯಲ್ಲಿ, ನನ್ನೊಬ್ಬನನ್ನು ಹೊರತುಪಡಿಸಿದರೆ ಬಾಕಿ ಎಲ್ಲರು ಮುಸಲ್ಮಾನರೆ. ಅದಕ್ಕೆ ಇವಾಗ ನಮ್ಮ ಆಫೀಸಲ್ಲಿ ಬೆಳಿಗ್ಗೆ ೯ ಘಂಟೆಗೆ ಕೆಲಸ ಶುರು ಮಾಡುತ್ತಿದ್ದೇವೆ, ಮದ್ಯಾಹ್ನ ೩.೩೦ ಘಂಟೆಗೆ ಮನೆಗೆ ಹೋಗುತ್ತಿದ್ದೇವೆ. ಮೊದಲಿನಹಾಗೆ ಕೇಳಿದಾಗೆಲ್ಲ ಕಾಫಿ ಟೀ ಸಿಗಲ್ಲ. ನನಗೊಬ್ಬನಿಗೆ ನಮ್ಮ ಹುಡುಗ ಬೆಳಿಗ್ಗೆ ಕಾಫಿ ಮತ್ತೆ ನೀರನ್ನ ತಂದುಕೊಡುತ್ತಾನೆ. ಅದನ್ನ ನನ್ನ ಜಾಗದಲ್ಲೇ ಕುಳಿತು ಅಥವಾ ಆಫೀಸಿನ ಅಡುಗೆಮನೆಯಲ್ಲಿ ಕುಳಿತು ಕುಡಿಯೋ ಪರಿಸ್ಥಿತಿ ಬಂದಿದೆ. ಊಟ ಅಥವಾ ತಿಂಡಿ ಬ್ರೇಕ್ ಇರುವುದಿಲ್ಲ. ಅದಕ್ಕಾಗಿ ಬೆಳಿಗ್ಗೆನೆ ಮನೆಯಲ್ಲಿ ಊಟ ಮುಗಿಸಿ ಬರುತ್ತಿದ್ದೇನೆ. ಇಲ್ಲಿನ ಮುಸಲ್ಮಾನರು ಸಂಜೆ ಮನೆಯಲ್ಲಿ ಪ್ರಾರ್ಥನೆ ಮಾಡಿ, ಕರ್ಜೂರದ ಹಣ್ಣು ತಿಂದು ತಮ್ಮ ದಿನದ ಉಪವಾಸವನ್ನು ಕೊನೆಗೊಳಿಸುತ್ತಾರೆ. ನಂತರ ಬೆಲಿಗಿನವರೆಗೂ ಏನು ಬೇಕಾದರು ತಿನ್ನುತ್ತಲೇ ಇರುತ್ತಾರೆ.

ಸಂಜೆ 6.30 ಯಿಂದ 7.30 ವರೆಗೆ ಎಲ್ಲ ಅಂಗಡಿ, ಹೋಟೆಲ್, ಮುಚ್ಚಿರುತ್ತವೆ. ಬಹರೈನಿನ ಎಲ್ಲ ರಸ್ತೆಗಳು ಕಾಲಿ ಇರುತ್ತವೆ. ಏನೋ ಬಂದ್ ಇದೆ ಅನ್ನೋತರ ಕಾಣ್ಸತ್ತೆ ನೋಡಿದ್ರೆ, ಆದ್ರೆ 7.30 ಆದಮೇಲೆ ಮತ್ತೆ ಜನ ರಸ್ತೆಗೆ ಬರ್ತಾರೆ (ನಡ್ಕೊಂಡಲ್ಲ, ಕಾರಲ್ಲಿ). ಪುಣ್ಯಕ್ಕೆ ಇವರೆಲ್ಲ ಉಪವಾಸ ಇರೋದ್ರಿಂದ ವಾತವರಣ ಚನಾಗಿದೆ, ಮಧ್ಯಪಾನ ಧೂಮಪಾನ ನಿಷೇಧಿಸಲಾಗಿದೆ. ಅಕಸ್ಮಾತ್ ಕುಡಿಯೊವಾಗ ಸೇದೊವಾಗ ಸಿಕ್ಕಿಹಾಕಿಕೊಂಡರೆ ಏನ್ಮಾಡ್ತಾರೆ ಅಂತ ಗೊತ್ತಿಲ್ಲ :)

ಬೇಸಿಗೆ ಕಾಲ ಮುಗಿಯುತ್ತ ಬಂದಿದೆ, Humidity ಸ್ವಲ್ಪ ಕಮ್ಮಿ ಆಗಿದೆ ಇವಾಗ. ದೊಡ್ಡೋರು ಹೇಳಿರೋ ಪ್ರಕಾರ ಸಕ್ಕತ್ Humidity ಇದ್ದರೆ ಕರ್ಜೂರ ಹಣ್ಣಾಗತ್ತಂತೆ, ಇಲ್ಲದಿದ್ದರೆ ಹಾಗೆ ಒಣಗತ್ತಂತೆ. ಹಾಗಾಗಿ ಇಲ್ಲಿ Humidityನು ಒಳ್ಳೆದೇನೆ. ಸಕ್ಕತ್ ಚನಾಗಿರೋ ಕರ್ಜೂರದ ಅರೆಹಣ್ಣು, ಮತ್ತು ಕಳಿತ ಹಣ್ಣು ಸಿಗತ್ತೆ ಇವಾಗ

ರಮಾದಾನ್ ತಿಂಗಳ ಪ್ರಯುಕ್ತ ಎಲ್ಲ ಅಂಗಡಿ ಮುಂಗಟ್ಟುಗಳಲ್ಲೂ ಒಳ್ಳೆಯ ರಿಯಾಯಿತಿ ಕೊಡುತ್ತಿದ್ದರೆ, ಆದ್ರೆ ಏನ್ ತೊಗೊಳೊಕೂ ಜನರ ಹತ್ತಿರ ದುಡ್ಡಿಲ್ಲ ಅಷ್ಟೆ. ಭಾರತದಿಂದ ಬರೋ ಎಲ್ಲ ಸಾಮಾನಿನ ಬೆಲೆ ಗಗನ ಮುಟ್ಟಿದೆ

ಈ ದೇಶದಲ್ಲಿ ನಮ್ಮ ಜನ ಗಣಪತಿ ಹಬ್ಬ ಗೌರಿ ಹಬ್ಬ ಮಾಡ್ತಿದಾರೆ. ಇಂಪೋರ್ಟೆಡ್ ಗಣಪ ಸಿಗ್ತಾನೆ, ಅಲಂಕಾರಕ್ಕೆ ಭಾರತದಿಂದನೆ ಹೂವು ಬರುತ್ತೆ ( ಹಬ್ಬಕ್ಕೆ ಮೊದಲ ರೇಟ್: ಒಂದು ಮಾರಿಗೆ ಕೇವಲ ಒಂದು ದಿನಾರ್ ಅಷ್ಟೆ, ನಿನ್ನೆ ಎಷ್ಟಿತ್ತು ಅಂತ ಕೇಳಿಲ್ಲ). ನಮ್ಮ ಮನೆಯಲ್ಲಿ ಈ ವರ್ಷ ಹಬ್ಬ ಇಲ್ಲದ ಪ್ರಯುಕ್ತ ನಾವು ಯಾವುದೇ ಆಚರಣೆ ಮಾಡಲಿಲ್ಲ. ಪಾಪ ನಮ್ಮ ಲಕ್ಷ್ಮಿಗೆ ಇನ್ನೊ ಬೇಜಾರಿದೆ ಅದ್ರ ಬಗ್ಗೆ....

ನೀವೆಲ್ಲ ಹಬ್ಬ ಹೇಗೆ ಮಾಡಿದ್ರಿ ಅಂತ ಪತ್ರ ಬರದು ತಿಳಿಸಿ.

ನಮಸ್ಕಾರ ಮತ್ತೆ ಸಿಗೋಣ

ಆದಿತ್ಯ