10/19/2006 02:20:00 PM

ನೀಚಡಿಯ ದೀಪಾವಳಿ ಹಬ್ಬ

ಅದೇನೊ ಗೊತ್ತಿಲ್ಲ, ಈ ದೀಪಾವಳಿ ಹಬ್ಬ ಬಂದರೆ ಸಾಕು ನಮ್ಮೂರಿನ ಜನ ಸಕ್ಕತ್ ಚುರುಕಾಗಿಬಿಡ್ತಾರೆ. ಹಬ್ಬ ಇರೋದು 3 ದಿನ ಮಾತ್ರ ಆದರೂನು, ಜನ 15 ದಿನ ಮುಂಚೆನೆ ಹಬ್ಬದ ಕೆಲಸ ಶುರು ಮಾಡಿರ್ತಾರೆ. ಎತ್ತಿನ ಗಾಡಿ, ನೊಗ, ನೇಗಿಲು, ಗುದ್ದಲಿ, ಇತ್ಯಾದಿ ಕೃಷಿ ಉಪಕರಣಗಳನ್ನ ತೊಳೆದು, ಪೇಯಿಂಟ್ ಮಾಡಿ, ಎಣ್ಣೆ ಹಚ್ಚಿ, ಪೂಜೆ ಮಾಡೋಕೆ ಇಡೋದನ್ನ ನೋಡೋಕೆ ಬಹಳ ಚನಾಗಿರತ್ತೆ.

ನಮ್ಮನೇಲಿ ಇದ್ದಿದ್ ಎಲ್ಲ ರೈತೊಪಕರನಗಳನ್ನ ತೊಳಸಿ ಇಡ್ತಿದ್ರು, ಅದ್ರ ಜೊತೆ ಹಳೆ ಬಂಡಿ ಗಾಲಿ (ಅದೂ ನಮ್ಮಜ್ಜ ಸಣ್ಣಕಿದ್ದಾಗ ಮನೇಲಿ ಇದ್ದಿದ್ ಗಾಡಿದು, ಉಳ್ಕೊಂಡಿರೋ ಏಕಮಾತ್ರ componetu) ಜೋಡಿಸಿ ಪೂಜೆಗೆ ಇಟ್ರು ಅಂದ್ರೆ ಅರ್ಧ ಕೆಲಸ ಮುಗಿದ ಹಾಗೇನೆ. ಆದ್ರೆ ಇವಾಗ ಎತ್ತಿನ ಗಾಡಿನ, ಎತ್ತಿನ ಜೊತೇನೆ ಮಾರಿಬಿಟ್ಟಿದ್ದಾರೆ, ಹಂಗಾಗಿ ಹಳೇ scene ಇರಲ್ಲ :((
ಹಂಗಂತಾ ನಮ್ಮ ಕಡೇ ನರಕ ಚತುರ್ದಶಿಗೆ ಹೆಚ್ಚಿಗೆ ಪ್ರಾಮುಖ್ಯತೆ ಇಲ್ಲ. ಅವತ್ತಿನ ದಿನ ಬರೀ ಎಣ್ಣೆ ಹಚ್ಹ್ಸ್ಕೊಂದು, ತಲೆಗೆ ನೀರು ಹಾಕಿಸಿಕೊಂಡರೆ ನಮ್ಮಜ್ಜಿ ನಮ್ಮನ್ನೆಲ್ಲ ಕೂರ್ಸಿ ಆರತಿ ಮಾಡ್ತಿದ್ರು (ಅದ್ರ ಜೊತೆ ನಮ್ಮಜ್ಜ 5 ರುಪಾಯಿ ಕೊಡ್ತಿದ್ರು ನಮಿಗೆಲ್ಲ). ನಮ್ಮ ಹಬ್ಬ ಅಷ್ಟಕ್ಕೆ ಮುಗೀತು.
ದೀಪಾವಳಿ ಅಮಾವಾಸ್ಯೆ ದಿನ ಬೆಳಿಗ್ಗೆ ಎದ್ದು, ತೋಟಕ್ ಹೋಗಿ, ಹಿಂಗಾರ, ಹಣ್ಣು ಅಡಿಕೆ, ಮತ್ತೆ ಅದೆನೆನೇನೋ ಸೊಪ್ಪು ಸೆದೆ ಎಲ್ಲ ಕೊಯ್ಸ್ಕೊಂದು ಬರ್ತಿದ್ವಿ. ಆಮೇಲೆ ಅದನ್ನೆಲ್ಲಾ ಸೇರ್ಸಿ ದೊಡ್ಡ ದೊಡ್ಡ ಹಾರಗಳನ್ನೆಲ್ಲ ಮಾಡ್ತಿದ್ವಿ. ಮಧ್ಯಾಹ್ನಕ್ಕೆ ಶುರು ಆಗ್ತಿತ್ತು ನೋಡಿ ನಿಜವಾದ ತಲೆ ಬಿಸಿ ಕೆಲಸ, ಕಾಲ್ಪೂಜೆ ಸಾಮಾನು ಇಸ್ಕೊಳೋಕೆ ಬರೋ ಜನರನ್ನ ಸಂಭಾಳ್ಸೋಷ್ಟ್ರಲ್ಲಿ ನಮಿಗೆಲ್ಲ ಸುಸ್ತಾಗ್ಬಿಡ್ತಿತ್ತು. ಅವರನ್ನೆಲ್ಲ ಕಳ್ಸಿದ ಮೇಲೆ, ಮತ್ತೆ ಹಿತ್ಲಲ್ಲಿ ಇದ್ದಿದ್ದ ಎಲ್ಲ ಚೆಂಡೂವನ್ನು ಕಿತ್ಕೊಂಡ್ ಬಂದು ಮತ್ತೆ ಹಾರಗಳನ್ನ ಮಾಡ್ಬೇಕಿತ್ತು ( ಅದೂ ಬೇರೆ ಬೇರೆ ಅಳತೆಗೆ. ಹುಹ್).

ಈ ಜನರನ್ನೆಲ್ಲ ಕಳ್ಸಾದ್ಮೇಲೆ, ಕೆಲ್ಸದೊನು ಒಂದು ದೊಡ್ಡ ಹೊರೆ ಮಾವಿನ ಸಪ್ಪನ್ನ ತಂದು ಹಾಕೋನು. ನಮ್ಮನೆಲ್ಲೋ ಮೊದ್ಲೇ 108 ಕಡೇ ಪೂಜೆ ಮಾಡ್ದಿಸಬೇಕು, ಎಲ್ಲ ಕಡೆಗೂ ಒಂದು ಮಾವಿನ ತೋರಣ ready ಮಾಡಿಕೊಳ್ಳಬೇಕಿತ್ತು. ಆಮೇಲೆ ಎಲ್ಲ ಪೂಜೆಗೂ ತೆಂಗಿನ ಕಾಯಿನ ಸುಲಿದು ready ಮಾಡಿ ಇತರೆ ಅವತ್ತಿನ ಕೆಲಸ ಮುಗೀತು.

ಗೊಪಾಡ್ಯದ ದಿನ ಬೆಳಿಗ್ಗೆ 5 ಗಂತೆಗೆನೆಯೇ ನಮ್ಮಪ್ಪ ಬೆನ್ನ ಮೇಲೆ ಪೆಟ್ಟು ಕೊಟ್ಟು ಎಬ್ಸ್ತಿದ್ರು, (ಎದ್ದೇಳ್ರೋ ಮಕ್ಳ ಹಬ್ಬದ ದಿನಾನು ಅದೆಷ್ಟ್ ಹೊತ್ತು ನಿದ್ದೆ ಮಾಡ್ತಿರ ಅಂತ ಸೆಪರೇಟ್ ಆಗಿ ಹೇಳ್ತಿದ್ರು ಕೂಡ). ಆಮೇಲೆ ಅಮ್ಮ ಮಡ್ಕೊಡ್ತಿದ್ದ ಕಾಫಿ ಕುಡ್ದು ಕೊಟ್ಟಿಗೆ ಕಡೇ ಓಡ್ತಿದ್ವಿ.

ಮನೇಲಿರೋ ಎಲ್ಲ ಆಕಳು ಅಂಡ್ ಅದ್ರ ಫ್ಯಾಮಿಲಿ, ಎಮ್ಮೆ, ಎತ್ತುಗಳು ಎಲ್ಲದನ್ನು ಒಂದೊಂದಾಗೆ ಹೊರಗೆ ತೊಗೊಂಡುಹೊಗಿ ಮನೆ ಎದ್ರುಗೆ ಇರೋ ಕಂಭಕ್ಕೆ ಕಟ್ಟಿದರೆ ನಮ್ಮಪ್ಪ ಮತ್ತೆ ನಮ್ಮನೆ ಕೆಲ್ಸದೊನು ಅವುಕ್ಕೆ ಬಿಸಿ ನೀರಿನ ಅಭ್ಯಂಜನ ಮಾಡ್ಸ್ತಿದ್ರು. ನಾವು ಬರೀ ಬಿಸಿ ನೀರನ್ನ, ಅಲ್ಲೆಲ್ಲ್ಲೂ ನಮ್ಮನೆ ಹಿಂದ್ಗಡೆ ಇರೋ ಹಂಡೆ ಇಂದ ಹೊತ್ಕೊಂಡು ಬಂದು, ರಸ್ತೆ ಪಕ್ಕ ಇಟ್ಟಿರೋ ಬಾನಿಗೆ ಸುರ್ಯೋಶ್ಟ್ರಲ್ಲಿ ಈ ಹಬ್ಬ ಮನುಷ್ಯರಿಗಲ್ಲ ಅಂತ ಅನಸ್ತಿತ್ತು. ಅದೂ ನಿಜಾನೆ ಹಂಗಂತ ನಮ್ಮ ಕಡೇ ದೀಪಾವಳಿ ಮನುಷ್ಯರಿಗಲ್ಲ, ಬರೀ ಮನೇಲಿರೋ ಜಾನುವಾರುಗಳಿಗೆ ಮಾತ್ರ ಅವತ್ತು ಹಬ್ಬ.

ಅದರೆ ಅವುಗಳ ಸ್ನಾನ ಮುಗ್ದು, ಒಣಗಿದಮೇಲೆ, ಮತ್ತೆ ನಮ್ಮ ಕೆಲಸ ಶುರು. ಜೇಡಿ ಕೆಮ್ಮಣ್ಣು ತಂದು ಪುಡಿ ಮಾಡಿ ನೀರಿನ ಜೊತೆ ಕಲಸಿ ಎಲ್ಲ ಜಾನುವಾರಿನ ಮೈ ಮೇಲೆ, ಗೋವಿನ ಪಾದ ಹಾಕೋ ಕೆಲಸ ಸಕ್ಕತ್ ಖುಷಿ ಕೊಡ್ತಿತ್ತು. ಅದ್ರ ಜೊತೆ ನಮಿಗೆಲ್ಲ ಯಾವ ಆಕಳು ಕರು ಇಷ್ಟನೋ ಅದನ್ನ ಸಿಂಗಾರ ಮಾಡೋ ಜವಾಬ್ದಾರಿನು ನಮ್ಮದೇ ಆಗಿರ್ತಿದ್ರಿಂದ ನಮಿಗೆಲ್ಲ ಸ್ವಲ್ಪ ಕೆಲಸ ಖುಷಿ ಎರಡೂ ಸ್ವಲ್ಪ ಜಾಸ್ತಿನೆ ಆಗ್ತಿತ್ತು.
ಹಿಂದಿನ ದಿನ ಕಟ್ಟಿದ ಚೆಂಡೂವಿನ ಹಾರನ ಎಲ್ಲ ಜಾನುವಾರುಗಳಿಗೂ ಕಟ್ಟಿ, ready ಮಾಡಿದಮೇಲೆ, ನಮ್ಮಜ್ಜ ಗೋಪಾಲರಾಯರು ಮನೆ ದೇವ್ರು ಪೂಜೆ ಮುಗ್ಸಿ, ಹೊರಗೆ ಬರ್ತಿದ್ರು, ಆಮೇಲೆ ಮನೆಯ main ಗೋವು ಮತ್ತೆ ಅದ್ರ ಕರು ಎರಡನ್ನೂ ಸಿಂಗಾರ ಮಾಡಿ ಮನೆ ಅಂಗಳದಲ್ಲಿ ಇರೋ ಅಡಿಕೆ ಚಪ್ಪರದ ಕಂಭಕ್ಕೆ ಕಟ್ಟಿರ್ತಿದ್ವಿ. ನಮ್ಮಜ್ಜ ಪೂಜೆ ಮಾಡ್ತಿದ್ರು, ನಮ್ಮಜ್ಜಿ ಅದೇನೊ ರೊಟ್ಟಿ ಮಾಡ್ತಿದ್ರು, ಎಲ್ಲ ಜಾನುವಾರುಗಳಿಗೂ ಕೊಡೋಕೆ ಅಂತ ( ಹಂಗಂತ ಅದನ್ನ ನಾವು ತಿನ್ನೋ ಹಾಗಿರಲಿಲ್ಲ, ಒಂದ್ಸಲ ತಿಂದಿದ್ದೆ, ರುಚಿನು ಇರ್ಲಿಲ್ಲ). ಅದನ್ನ ತೊಗೊಂಡು ಹೋಗಿ ಎಲ್ಲ ಕಾಲ್ನಡೆಗು ತಿನ್ನಿಸಬೇಕಿತ್ತು. ಅಷ್ಟ್ ಮಾಡೋಷ್ಟ್ರಲ್ಲಿ, ಊರಿನ ಜನ ರಾಹು ಕಾಲ ನೋಡ್ಕೊಂಡು, ಅವರ ಅವರ ಮನೆ ಜಾನುವಾರನ್ನ ಹೊರಗೆ ಬಿಡೋಕೆ ಶುರು ಮಾಡ್ತಿದ್ರು, ನಮ್ಮನೆದುನ್ನು ಹಂಗೆ ಹೊರಗೆ ಬಿಡ್ತಿದ್ವಿ. ನಾವೆಲ್ಲ ಹಂಗೆ ಜಾನುವಾರುಗಳ ಹಿಂದೆ ಜಾಗಟೆ ಹೊಡೀತ ರಸ್ತೆ ಮೇಲೆ ಹೋಗ್ತಿರೋ ಎಲ್ಲ ಆಕಳನ್ನು ಕಂಗಾಲ ಮಾಡ್ತಿದ್ವಿ. ಹಂಗಂತ ನಮ್ಮೂರಲ್ಲಿ ಪಟಾಕಿ ಹೊಡಿಯಲ್ಲ ದೀಪಾವಳಿ ಹಬ್ಬದಲ್ಲಿ ( time ಕೂಡ ಇರಲ್ಲ ಹೊಡಿಯೋಕೆ).

ಜಾನುವಾರುಗಳನ್ನೆಲ್ಲಾ ಬ್ಯಾಣಕ್ಕೆ ಕಳ್ಸಿದ್ಮೇಲೆ ಮನೆಗ್ ಬಂದು, ತಿಂಡಿ ತಿಂದು, ದೇವಸ್ಥಾನಕ್ಕೆ ಹೋಗ್ತಿದ್ವಿ. ಅಲ್ಲಿಗೆ ಇಡೀ ಊರಿನ ಜನ ಎಲ್ಲ ಬರೋರು. ನಮ್ಮನೇಲಿ ಬಹಳ ಕಡೆ ಪೂಜೆ ಮಾಡ್ತಿದ್ರಿಂದ ಒಬ್ಬೋಬ್ರುನ್ನು ಒಂದೊಂದ್ ಕಡೆ ಕಳ್ಸ್ತಿದ್ರು, ಒಬ್ರು ಗದ್ದೆಗೆ ಹೋಗಿ ಪೂಜೆ ಮಾಡಿ, ಹೊಸ ಬತ್ತದ ತೆನೆ ತಂದರೆ ಮತ್ತೊಬ್ರು ಚೌಡಮ್ಮ, ಭೂತಪ್ಪ, ನಾಗಪ್ಪ, ಹಿಂಗೆ ಎಲ್ಲ ದೇವ ಭೂತ ಗಣಗಳಿಗು ಪೂಜೆ ಮಾಡಿ ಬರ್ತಿದ್ರು.

ದೇವಸ್ಥಾನಕ್ಕೆ ಹೋದಮೇಲೆ 2 ತೆಂಗಿನ ಕಾಯಿ ಕೊಡ್ಬೇಕು ಪ್ರತಿ ಮನೆ ಇಂದನು ಊರಿನ ಗಡಿ ಭೂತದ ಪೂಜೆಗೆ ಅಂತ. (2 ಯಾಕೆ ಅಂದ್ರೆ ನೀಚಡಿಲಿ ಮೇಲಿನ ಭೂತ ಕೆಳಗಿನ ಭೂತ ಅಂತ 2 ಊರಿನ ಕಾವಲುಗಾರ ಭೂತಗಳು ಇವೆ, ಇವ್ರ ಜೊತೆಗೆ ಬ್ರಹ್ಮ ಮತ್ತೆ ಇನ್ನೊಂದು ಚೌಡಮ್ಮ ಇವರಿಗೂ ಪೂಜೆ ಮಾಡ್ಕೊಂಡು ಬರಬೇಕು). ಆ ವರ್ಷ ಯಾರ ಮನೆಗಳ ಬಾರಿನೋ ಅವ್ರು ತೆಂಗಿನ ಕಾಯಿ ಬುಟ್ಟಿ ಹೊತ್ಕೊಂಡು ಹೋಗಿ ಭೂತದ ಪೂಜೆ ಮಾಡ್ಕೊಂಡ್ ಬರ್ತಿದ್ರು. (ನಾನು ಎರಡೇ ಎರಡ್ ಸಲ ಹೋಗಿದ್ದೆ, ಅದ್ರ ಕಷ್ಟ ಮಾತ್ರ ಹೇಳ್ಕೊಲೋಕೆ ಆಗಲ್ಲ).

ದೇವಸ್ಥನದಿಂದ ಬಂದಮೇಲೆ, ಸಕ್ಕತ್ತಾಗಿ ಹಬ್ಬದ ಊಟ ಮಾಡ್ಬಿಟ್ರೆ ಮನಸ್ಸಿಗೆ ಸಕ್ಕತ್ ಸಮಾಧಾನ ಆಗ್ತಿತ್ತು. ಊಟ ಮಾಡ್ಕೊಂಡು ಬರೋಷ್ಟರಲ್ಲಿ, ಭೂತದ ಪೂಜೆಗೆ ಹೋದೋರು ವಾಪಾಸ್ ಬರ್ತಿದ್ರು, ಅವರ ಮನೆಗೆ ಹೋಗಿ ಪ್ರಸಾದ ಇಸ್ಕೊಂಡು ಬಂದ್ರೆ ಹಬ್ಬದ main programme ಮುಗೀತು. ಆಮೇಲೆ ಸಂಜೆವರೆಗೂ full ರೆಸ್ಟು.

ಸಂಜೆ ಕೆಲ್ಸದೊನು ಜನುವಾರುಗಳನ್ನ ಮನೆಗೆ ಹೊಡ್ಕೊಂಡು ಬರ್ತಿದ್ದಹಾಗೆನೆ, ನಮ್ಮಜ್ಜಿ ಅವುಕ್ಕೆಲ್ಲ ಆರತಿ ಮಾಡಿ, ಕೊಟ್ಟಿಗೆ ಒಳಗೆ ಬಿಡ್ತಿದ್ರು. ಆಮೇಲೆ ಕೆಲ್ಸದೊನು ಪುಂಡಿ ಕೋಲಿನ ದೊಂದಿ ಮಾಡ್ಕೊಂಡು ಬರ್ತಿದ್ದ. ನಮ್ಮಜ್ಜ ಅದೆಲ್ಲ ಸರಿಯಾಗಿದಿಯೋ ಇಲ್ವೋ ಅಂತ ನೋಡಿ, ಮತ್ತೆ ಸಂಜೆ ಪೂಜೆಗೆ ರೆಡಿ ಆಗ್ತಿದ್ರು.

ರಾತ್ರಿ ಬಲಿ ಚಕ್ರವರ್ತಿನ ಪಾತಾಳ ಲೋಕಕ್ಕೆ ವಾಪಾಸು ಕಳಸೋ ಪೂಜೆ. ಅದನ್ನ ಮಾಡಿದಮೇಲೆ, ನಮಿಗೆಲ್ಲ, ದೊಂದಿ ಹಚ್ಕೊಡ್ತಿದ್ರು , ನಾವು ಅದನ್ನ ಹಿಡ್ಕೊಂಡು, ಪೂಜೆಗೆ ಇಟ್ಟಿದ್ದ ಕಳಶದ ಸುತ್ಲೂ 3 ಸಲ ದೀಪ್ ದೀಪ್ ಹೋಳಿಗ್ಯೋ ಹಬ್ಬಕ್ಕೆ 16 ಹೋಳಿಗ್ಯೋ ಅಂತ ಜೋರಾಗಿ ಹೇಳ್ತಾ ಸುತ್ತುತಿದ್ವಿ. ಆಮೇಲೆ ಆ ದೊಂದಿನ ರಸ್ತೆ ಪಕ್ಕ ಇರೋ ಮನೆ ಕಟ್ಟೆಗೆ ನೆಟ್ಬಂದು ಮತ್ತೆ ಆರತಿ ಮಡ್ಸ್ಕೊಳ್ತಿದ್ವಿ, ನಮ್ಮಜ್ಜ ಮತ್ತೆ ೫ ರೂಪಾಯಿ ಕೊಡ್ತಿದ್ರು ಪ್ರತಿಯೊಬ್ರಿಗುನು )).

ಅಷ್ಟಾದ್ಮೇಲೆ ದೇವಸ್ತಾನದಲ್ಲಿ ನಡಿಯೋ ಹೊಸ ಅಳಿಯನ ಕಾರ್ತಿಕಕ್ಕೆ (ಅಂದ್ರೆ ಆ ವರ್ಷದಲ್ಲಿ ಯಾರ ಮನೆಗೆ ಹೊಸ ಅಳಿಯ ಬಂದಿರ್ತನೋ ಅವ್ರ ಮನೆ ಕಾರ್ತೀಕ) ಓಡ್ತಿದ್ವಿ. ಅಲ್ಲಿ ಪೂಜೆ ಅದಮೇಲೆ ಕೊಡೊ ಪ್ರಸಾದ ತಿಂದು ಮನೆ ಕಡೆ ಓಡಿಹೋದರೆ ಅಲ್ಲಿಗೆ ನಮ್ಮ ದೀಪಾವಳಿ ಮುಗೀತು.

ಓಹ್ ಹಂಗಂತ ಇಷ್ಟಕ್ಕೆ ಮುಗಿಲಿಲ್ಲ ದೀಪಾವಳಿ ಹಬ್ಬ. ಮಾರನೇ ದಿನ ಬೆಳಿಗ್ಗೆ ಎದ್ದು ಸ್ನಾನ ತಿಂಡಿ ಮುಗ್ಸ್ಕೊಂಡು, ತಳಗಿನಮನೆ ಬಸವಣ್ಣನ ಪೂಜೆಗೆ ತೆಂಗಿನ ಕಾಯಿನ ಹೊತ್ಕೊಂಡು ಹೋಗಬೇಕಿತ್ತು ( ಅದೋ ಮನೇಲಿ ಎಷ್ಟು ಕಾಲ್ನಡೆ ಇರತ್ತೋ ಅಷ್ಟು ತೆಂಗಿನಕಾಯಿ). ಇದೂ ಒಂತರ ಸಾಹಸನೆ, ಯಾಕೆಂದ್ರೆ ತೆಂಗಿನಕಾಯಿ ಚೀಲ ಹೊತ್ಕೊಂಡು ಹುಲಿಗುಡ್ದ ಹತ್ತಿ, ಮತ್ತೆ ಆ ಕಡೆ ತಪ್ಪಲಲ್ಲಿ ಇರೋ ತಳಗಿನಮನೆ ಗ್ರಾಮಕ್ಕೆ ಹೋಗೋದು ಅಂದ್ರೆ ಸುಮಾರಿನ ವಿಚಾರ ಅಲ್ಲ. ಆದ್ರೆ ಅಲ್ಲಿಗೆ ಹೋಗೋದು ಒಂತರ ಮಜಾ ಕೊಡ್ತಿತ್ತು, ಊರಿನ ಎಲ್ಲ ಹುಡುಗ್ರು ಕಾಯಿಚೀಲ ಹೊತ್ಕೊಂಡು ಅಲ್ಲಿಗೆ ಹೋಗಿ ಬಸವಣ್ಣನ ಪೂಜೆ ಮಾಡ್ಕೊಂಡು ಬರತಿದ್ವಿ. ಮನೆಗೆ ಬಂದ್ಮೇಲೆ, ಅದೆಲ್ಲ ಕಾಯಿನು ತುರಿದುಕೊಟ್ರೆ, ಅಮ್ಮ ಬಿಸಿ ಬಿಸಿ ತೆಂಗಿನ ಕಾಯಿ ಮಿಠಾಯಿ ಮಾಡ್ಕೊಡ್ತಿದ್ರು :))

ಅಂತು ಇಂತೂ ಇಲ್ಲಿಗೆ ಮುಗೀತು ನನ್ನ ದೀಪಾವಳಿ ಪುರಾಣ :)